ಕೆ.ಆರ್.ಪೇಟೆ : ಜಾ.ದಳ ಪಕ್ಷವು ರಾಜ್ಯಾದ್ಯಂತ ಅಭ್ಯರ್ಥಿ ಹಾಕುವ ಶಕ್ತಿ ಇಲ್ಲದ ಪಕ್ಷವಾಗಿದೆ. ಇದು ಕೇವಲ ಒಂದೆರಡು ಜಿಲ್ಲೆಗೆ ಸೀಮಿತವಾದ ಪಕ್ಷವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಮಂಡ್ಯ ಲೋಕಸಭೆಯಲ್ಲಿ ಗೆದ್ದಿದ್ದಾರೆ. ಇಲ್ಲದಿದ್ದರೆ ಕುಮಾರಸ್ವಾಮಿ ಗೆಲ್ಲುತ್ತಿರಲಿಲ್ಲ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮೊನ್ನೆ ಕೆ.ಆರ್.ಪೇಟೆಯಲ್ಲಿ ನಡೆದ ಜಾ.ದಳ ಸಭೆಯಲ್ಲಿ ಆ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ನಮ್ಮ ಪಕ್ಷದ ನಾಯಕರು ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲಾಟರಿ ಸಿಎಂ ಹಾಗೂ ನಮ್ಮ ಜಾ.ದಳ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿವುದರನ್ನು ಖಂಡಿಸಿದರು. ನಿಖಿಲ್ ಅವರಿಗೆ ಇತಿಹಾಸದ ಮಾಹಿತಿ ಕೊರತೆ ಇದೆ. ಜಾ.ದಳ ಪಕ್ಷವು ಸಿದ್ದರಾಮಯ್ಯ ಅವರನ್ನು ಉಚ್ಚಾಟನೆ ಮಾಡಿದ ಬಳಿಕ ಅಖಿಲ ಭಾರತ ಪ್ರಗತಿ ಪರ ಜನತಾದಳ ಪಕ್ಷವನ್ನು ಸ್ಥಾಪನೆ ಮಾಡಿದ ಸಿದ್ದರಾಮಯ್ಯ ಅವರು ೨೦೦೫ರಲ್ಲಿ ನಡೆದ ಜಿ.ಪಂ.ತಾ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಪ್ರಗತಿಪರ ಜನತಾದಳ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಅನಂತರ ೨೦೦೬ರಲ್ಲಿ ತಮ್ಮ ಲಕ್ಷಾಂತರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಿದರು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷವು ಏಕಾಏಕಿ ಸಿದ್ದರಾಮಯ್ಯ ಅವರನ್ನು ಬಂದ ತಕ್ಷಣ ಸಿಎಂ ಮಾಡಿಲ್ಲ. ಅವರು ಸುಮಾರು ೯ವರ್ಷಗಳ ಕಾಲ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರೊಂದಿಗೆ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಸಂಘಟನೆ ಮಾಡಿದರು. ೨೦೧೩ ರಲ್ಲಿ ರಾಜ್ಯದ ಮುಖ್ಯಮಂತ್ರಿ ಆದರು. ಆದರೆ ನಿಖಿಲ್ ಈ ಬಗ್ಗೆ ಕನಿಷ್ಠ ಜ್ಞಾನವೇ ಇಲ್ಲದೇ ಜಾ.ದಳ ಪಕ್ಷಕ್ಕೆ ದ್ರೋಹ ಮಾಡಿ ಹೋದರು. ಬೇರೆ ಯಾರೋ ಕಟ್ಟಿದ ಗೂಡಿಗೆ ಸೇರಿಕೊಂಡು ಮುಖ್ಯಮಂತ್ರಿಯಾದರು. ಹಾಗೇ-ಹೀಗೆ ಎಂದು ಇತಿಹಾಸ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ. ನಿಖಿಲ್ ಅವರಿಗೆ ಜಾ.ದಳ ಮುಖಂಡರು ಮೊದಲು ರಾಜಕೀಯ ಇತಿಹಾಸದ ಪಾಠ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ನಿಖಿಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಮಧುಮಾದೇಗೌಡ, ದಿನೇಶ್ ಗೂಳೀಗೌಡ, ಮನ್‌ಮುಲ್, ಪಿ.ಎಲ್.ಡಿ.ಬ್ಯಾಂಕುಗಳು, ಹಾಲಿನ ಡೇರಿಗಳು, ಸೊಸೈಟಿಗಳಲ್ಲಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಶಕ್ತಿಯನ್ನು ದ್ವಿಗುಣಗೊಳಿಸಿಕೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೭ಕ್ಕೆ ೭ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಜಾ.ದಳ ಇರುವ ೧ಸ್ಥಾನವನ್ನು ಕಳೆದುಕೊಂಡು ಶೂನ್ಯ ಸಾಧನೆ ಮಾಡಲಿದೆ ಎಂದು ಸಿ.ಡಿ.ಗಂಗಾಧರ್ ಭವಿಷ್ಯ ನುಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರನ್ನು ಟೀಕೆ ಮಾಡುವ ನೈತಿಕತೆ ನಿಖಿಲ್‌ಕುಮಾರಸ್ವಾಮಿ ಅವರಿಗಿಲ್ಲ. ರಾಜ್ಯದಲ್ಲಿ ಇಬ್ಬರೂ ಪ್ರಭಾವಿ ಕಾಂಗ್ರೆಸ್ ನಾಯಕರು. ಸಿದ್ದರಾಮಯ್ಯ ಅವರು ಅಧಿಕಾರದ ಆಸೆಗೆ ಬಿಟ್ಟು ಬಂದಿಲ್ಲ. ಅಧಿಕಾರ ಕೊಡಬೇಕಲ್ಲ ಎಂಬ ಸ್ವಾರ್ಥ ಮನೋಭಾವದಿಂದ ಜಾ.ದಳ ಪಕ್ಷದಿಂದ ಉಚ್ಚಾಟನೆ ಮಾಡಿ ಹೊರ ಹಾಕಿದವರು. ಆ ಪಕ್ಷವನ್ನು ೩೦ರಿಂದ ೩೫ವರ್ಷಗಳ ಕಾಲ, ಸಿದ್ದರಾಮಯ್ಯ, ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಪಿಜಿಆರ್ ಸಿಂದ್ಯ, ಎಚ್.ಸಿ.ಮಹಾದೇವಪ್ಪ, ಸತೀಶ್ ಜಾರಕೀಹೊಳಿ, ಎಂ.ಪಿ.ಪ್ರಕಾಶ್ ಮತ್ತಿತರರು ಕಟ್ಟಿ ಬೆಳೆಸಿದ ಪಕ್ಷ ಅದು. ಈ ಎಲ್ಲಾ ನಾಯಕರು ಹೊರ ಬಂದ ಮೇಲೆ ಪಕ್ಷ ದಯನೀಯ ಸ್ಥಿತಿಗೆ ಹೋಗಿದೆ. ಇದರಿಂದ ಅರ್ಥವಾಗುತ್ತದೆ ಸಿದ್ದರಾಮಯ್ಯ ಅವರ ವರ್ಚಸ್ಸು, ನಾಯಕತ್ವ ಇಲ್ಲದ ಪಕ್ಷ ಜಾ.ದಳ ಹೀನಾಯ ಸ್ಥಿತಿಗೆ ಹೋಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಯುಐಡಿಎಫ್‌ಸಿ ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಸಿ.ಆರ್.ರಮೇಶ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ತಾಲ್ಲೂಕು ದರಖಾಸ್ತು ಕಮಟಿ ಸದಸ್ಯ ಬಸ್ತಿ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್.ದಿವಾಕರ್, ತಾಲ್ಲೂಕು ಕಾಂಗ್ರೆಸ್ ಎಸ್.ಸಿ.ವಿಭಾಗದ ಅಧ್ಯಕ್ಷ ರಾಜಯ್ಯ, ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಬೊಪ್ಪನಹಳ್ಳಿ ರಮೇಶ್, ಎ.ಬಿ.ದೇವರಾಜು, ದ್ಯಾವಯ್ಯ, ಕೆ.ಬಿ.ಪ್ರಕಾಶ್ ಮತ್ತಿತರರಿದ್ದರು.