ಶ್ರೀರಂಗಪಟ್ಟಣ : ಶೋಷಿತ ವರ್ಗದ ಜನರು ತಮ್ಮ ಓಟು ಮಾರಿಕೊಳ್ಳದೆ, ಸ್ವಾಭಿಮಾನದಿಂದ ಬದುಕಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಆಮಿಷಗಳಿಗೆ ಬಲಿಯಾಗಿ ಓಟು ಮಾರಿಕೊಳ್ಳುವವರು ಭಿಕ್ಷುಕರಿಗೆ ಸಮಾನ. ಅದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾದುದು. ಮೌಢ್ಯಾಚರಣೆ ಬಿಡಬೇಕು. ಹೋಮ, ಹವನಗಳನ್ನು ಬಿಟ್ಟು ವೈಜ್ಞಾನಿಕವಾಗಿ ಯೋಚಿಸಬೇಕು. ಅಯ್ಯಪ್ಪಸ್ವಾಮಿಗೆ ಹೋದರೆ ಹೊಟ್ಟೆ ತುಂಬುವುದಿಲ್ಲ. ಹಸಿವು ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿ ಕುಟುಂಬಕ್ಕೆ ಮಾಸಿಕ ೪ ಸಾವಿರದಿಂದ ೫ ಸಾವಿರ ರೂ.ನೀಡುತ್ತಿದೆ ಎಂದರು.
ಕೆಆರ್‌ಎಸ್ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪು ಸುಲ್ತಾನ್ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ ಜನರಿಂದ ಆಯ್ಕೆಯಾಗುತ್ತಾನೆ. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಸಾಮಾನ್ಯ ವ್ಯಕ್ತಿಯನ್ನು ರಾಜನ ಸ್ಥಾನಕ್ಕೆ ಕೂರಿಸುವ ಶಕ್ತಿ ಇದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಾರ್ವಭೌಮನಾಗಿದ್ದಾನೆ. ಟಿಪ್ಪು ಸುಲ್ತಾನ್ ಕೆಆರ್‌ಎಸ್ ಬಳಿ ಅಣೆಕಟ್ಟೆ ಕಟ್ಟಲು ಅಡಿಗಲ್ಲು ಹಾಕಿದ್ದ. ದಲಿತರಿಗೆ ಭೂಮಿ ಹಂಚಿಕೆ ಮಾಡಿದ್ದ. ದೇವದಾಸಿ ಪದ್ದತಿಯನ್ನು ನಿಷೇಽಸಿದ್ದ. ಆತನನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನಕ್ಕೆ ೬ ಕೋಟಿ ರೂ. ಅನುದಾನ ಬೇಕೆಂದು ಕೇಳಿದ್ದಾರೆ. ಸರ್ಕಾರ ೨ ಕೋಟಿ ರೂ.ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದ ಸಚಿವರು, ಮಂಡ್ಯ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಏನೇನೂ ಅಭಿವೃದ್ಧಿ ಮಾಡದ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಟೀಕಿಸಿದರು.
೫೦ ಲಕ್ಷ ರೂ. ಬಿಡುಗಡೆಯಾಗಿದೆ: ಶಾಸಕ ರಮೇಶ ಬಂಡಿಸಿದ್ದೇಗೌಡ :- ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ೬ ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಸರ್ಕಾರ ೫೦ ಲಕ್ಷ ರೂ.ಬಿಡುಗಡೆಗೊಳಿಸಿದೆ. ಸಕಾಲಕ್ಕೆ ಅನುದಾನ ಕೊಡಿಸಿದರೆ ಒಂದು ವರ್ಷದಲ್ಲಿ ಈ ಭವನ ಉದ್ಘಾಟನೆಯಾಗಲಿದೆ. ಪಟ್ಟಣದ ಬಾಬು ಜಗಜೀವನರಾಂ ಭವನದ ಮುಂದುವರೆದ ಕಾಮಗಾರಿಗೆ ಇನ್ನೂ ೨ ಕೋಟಿ ರೂ. ಅನುದಾನದ ಅಗತ್ಯವಿದ್ದು, ಬಿಡುಗಡೆ ಮಾಡಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸಚಿವರಲ್ಲಿ ಮನವಿ ಮಾಡಿದರು.
ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಒಳ ಮೀಸಲಾತಿ ಜಾರಿ ವಿಷಯದಲ್ಲಿ ಯಾರೂ ಆತಂಕ ಪಡಬಾರದು. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಅಂಬೇಡ್ಕರ್ ಭವನ ಜ್ಞಾನ ದಾಸೋಹ ಕೇಂದ್ರವಾಗಬೇಕು. ಅಂಬೇಡ್ಕರ್ ಅವರ ಆಶಯದಂತೆ ಶೋಷಿತರು ಸ್ವಾಭಿಮಾನದಿಂದ ಬದುಕು ನಡೆಸಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಅಧಿಕಾರಿ ಪ್ರೀತಿ ಚಿಕ್ಕಸಿದ್ದಯ್ಯ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಚಾಮರಾಜನಗರದ ಬೋಧಿದತ್ತ ತೇರ ಮೈತ್ರಿ ಮಾತಾ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್.ನಂದಿನಿ, ಪುರಸಭೆ ಅಧ್ಯಕ್ಷ ಎಂ.ಎಲ್.ದಿನೇಶ್, ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಹಿರಿಯ ವಕೀಲ ಎಂ.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ಉಪ ವಿಭಾಗಾಽಕಾರಿ ಕೆ.ಆರ್.ಶ್ರೀನಿವಾಸ್, ತಹಸಿಲ್ದಾರ್ ಚೇತನಾ ಯಾದವ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ಭಾಗವಹಿಸಿದ್ದರು.





