Mysore
30
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಸರ್ಕಾರದ ಪ್ರೋತ್ಸಾಹ ಧನ ಸಾಲಕ್ಕೆ ಕಡಿತವಾಗದಿರಲಿ : ಶಾಸಕ ದರ್ಶನ್‌ ಪುಟ್ಟಣಯ್ಯ 

ಮಂಡ್ಯ : ಸರ್ಕಾರದ ಪ್ರೋತ್ಸಾಹ ಧನಗಳು ರೈತರ ಸಾಲಗಳಿಗೆ ಕಡಿತವಾಗದಂತೆ ಸಾಫ್ಟವೇರ್‌ ಅಳವಡಿಸಿಕೊಳ್ಳಿ ಎಂದು ಬ್ಯಾಂಕ್‌ ವ್ಯವಸ್ಥಾಪಕರಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಬ್ಯಾಂಕ್ ಗಳ ವ್ಯವಸ್ಥಾಪಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರು ಬ್ಯಾಂಕ್‌ ಗಳಲ್ಲಿ ಸಾಲ ಪಡೆದ ನಂತರ ಪ್ರತಿ ಮಾಹೆ ಖಾತೆಯಿಂದ ಸಾಲದ ಹಣ ನಿಗದಿತ ದಿನಾಂಕದಂದು ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಈ ನಿಯಮ ಸರ್ಕಾರದ ಪ್ರೊತ್ಸಾಹ ಹಣಗಳಿಗೆ ತಾಕದಂತೆ ಬ್ಯಾಂಕ್ ವ್ಯವಸ್ಥಾಪಕರು ಕೇಂದ್ರ ಕಚೇರಿಗೆ ಪತ್ರ ಬರೆಯಬೇಕು ಎಂದರು.

ರೈತರು ಅಥವಾ ಸಾರ್ವಜನಿಕರಿಗೆ ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನ ಸಾಲದ ಇ.ಎಂ‌.ಐ.ಗೆ ಕಡಿತ ಮಾಡಿಕೊಂಡ ನಂತರ ಸಂಬಂಧಿಸಿದವರು ಬ್ಯಾಂಕ್ ಗೆ ತೆರಳಿ ತಿಳಿಸಿದರೆ ಸಹಾಯಧನ ಖಾತೆಗೆ ಹಿಂದಿರುಗಿಸುವ ಬದಲು ಸಾಫ್ಟ್‌ವೇರ್ ಅಳವಡಿಸಿಕೊಳ್ಳಿ. ಬ್ಯಾಂಕಿಗೆ ತೆರಳಿ ಪ್ರಶ್ನಿಸುವ ಸಾಮರ್ಥ್ಯ ಎಲ್ಲಾ ಜನರು ಹೊಂದಿರುವುದಿಲ್ಲ. ಬ್ಯಾಂಕ್ ನಡೆಯುವುದು ಗ್ರಾಹಕರಿಂದ. ಗ್ರಾಮೀಣ ಪ್ರದೇಶದಲ್ಲಿ ಬಡ ರೈತರು ಬ್ಯಾಂಕಿನ ಗ್ರಾಹಕರಾಗಿದ್ದು, ಅವರೊಂದಿಗೆ ಗೌರವದಿಂದ ವರ್ತಿಸಿ. ಬ್ಯಾಂಕ್ ವ್ಯವಹಾರ ಹಾಗೂ ವಿವಿಧ ಮಾನದಂಡಗಳ ಬಗ್ಗೆ ಅವರಿಗೆ ಅರ್ಥವಾಗುವ ರೀತಿ ಕನ್ನಡದಲ್ಲಿ ತಿಳಿಸಿ ಎಂದರು.

ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ, ಸರ್ಕಾರದಿಂದ ನೀಡಲಾಗುವ ವಿವಿಧ ರೀತಿಯ ಸಾಮಾಜಿಕ ಪಿಂಚಣಿ, ಹಾಲಿನ ಪ್ರೋತ್ಸಾಹ ಧನ, ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಹಣ, ಮನರೇಗಾ ಕೂಲಿ, ಬೆಳೆ ನಷ್ಠದ ಹಣವನ್ನು ಮಾನವೀಯ ದೃಷ್ಠಿಯಿಂದ ಸಾಲದ ಮರುಪಾವತಿಗೆ ಕಡಿತ ಮಾಡಬೇಡಿ ಎಂದರು.

ಕನ್ನಡದಲ್ಲಿ ವ್ಯವಹರಿಸಿ: ಮಂಡ್ಯ ಜಿಲ್ಲೆ ರೈತರ ಜಿಲ್ಲೆಯಗಿದ್ದು, ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ. ಬಹಳಷ್ಟು ಬ್ಯಾಂಕ್ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಿಗೆ ಕನ್ನಡ ತಿಳಿದಿದ್ದರು, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡುತ್ತಾರೆ. ಈ ಧೋರಣೆ ಬದಲಾಗಬೇಕು ಎಂದರು.

ರೈತರು ಪಡೆಯುವ ಬೆಳೆ ಸಾಲವನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡಿದರೆ ಬಡ್ಡಿಯ ಹಣದ ಶೇ 3 ರಷ್ಟು ರಿಬೇಟ್ ಹಿಂದಿರುಗಿಸುವ ಯೋಜನೆಯಿದ್ದು ಇದರ ಬಗ್ಗೆ ರೈತರಿಗೆ ಮಾಹಿತಿ ನೀಡಿ ಎಂದರು.

ಬ್ಯಾಂಕ್ ಗೆ ಸಂಬಂಧಿಸಿದಂತೆ ಗ್ರಾಹಕರ ಸೇವಾ‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸೇವಾ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಅಳವಡಿಸುವುದು ಉತ್ತಮ. ಇದರಿಂದ ಗ್ರಾಹಕರಿಂದ ದೂರು ಬಂದಲ್ಲಿ ಪರಿಶೀಲಿಸಲು ಸುಲಭ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ರೈತ ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು‌.

Tags:
error: Content is protected !!