ಮಂಡ್ಯ: ರಾಷ್ಟೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆ ಅಡಿಯಲ್ಲಿ ಪಶು ಸಖಿ ಹಾಗೂ ಕೃಷಿ ಸಖಿಯರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು ಎಂದು ಕೇಂದ್ರ ಸರ್ಕಾರದ ಸಚಿವ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು.
ಅವರು ಇಂದು (ಆ.26) ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಹಲವಾರು ಯೋಜನೆಗಳಿದ್ದು, ಜನ ಸಾಮಾನ್ಯರು, ಬಡವರು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಬೇರೆ ಬೇರೆ ಜಿಲ್ಲೆಗೆ ಹೋಲಿಸಿದಾಗ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ನೈಸರ್ಗಿಕ ಸಂಪನ್ಮೂಲ ಇದ್ದರೂ ಅಭಿವೃದ್ಧಿಯ ಕೊರತೆ ಇದೆ ಎಂದರು.
ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆಯ ಪ್ರಯತ್ನವು ಕಂಡು ಬಂದಿದ್ದು, ಇನ್ನುಮುಂದೆ ಈ ರೀತಿಯ ಪ್ರಕರಣವು ಜರುಗದಂತೆ ಅಧಿಕಾರಿಗಳು ಕ್ರಮ ಕೈಗೊಂಡು ಎಚ್ಚರಿಕೆ ವಹಿಸಬೇಕು ಎಂದರು.
ಕೆ.ಆರ್.ಜಲಾಶಯ ತುಂಬಿದ್ದು, ಕೆರೆಗಳಿಗೆ ನೀರು ತುಂಬಿಸುವ ಕೆಲಾವಾಗಬೇಕು. ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕೊನೆಯ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸುನ ರೈತರಿಗೆ ನೀರು ತಲುಪುತ್ತಿಲ್ಲ. ಅಧಿಕಾರಿಗಳು ಚುರುಕಾಗಿ ಕೆಲಸ ನಿರ್ವಹಿಸಬೇಕಿದೆ ಎಂದರು.
ನೀರಾವರಿ ಇಲಾಖೆ ಅವರು ಕೃಷಿಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕು. ಹೂಳು ತೆಗೆಯುವ ಕೆಲಸ ಸರಿಯಾದ ಸಮಯಕ್ಕೆ ನಿರ್ವಹಿಸಬೇಕು ತಾಂತ್ರಿಕ ಕಾರಣಗಳನ್ನು ತಿಳಿಸಿ ಥೈಲ್ಯಾಂಡ್ ಗೆ ನೀರು ತಲುಪುತ್ತಿಲ್ಲ ಎಂದು ಹೇಳಿದರೆ ರೈತರು ಒಪ್ಪುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ ಎಂದರು.
ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಪಾಸ್ ಪೋಟ್೯ ಸೇವಾ ಕೇಂದ್ರ ತೆರೆಯಲು ಸ್ಥಳ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ರೈತರು ಆರ್ಥಿಕವಾಗಿ ಸುಭದ್ರರಾದರೆ ಆತ್ಮಹತ್ಯೆಯಂತಹ ಪ್ರಕರಣಗಳು ಇರುವುದಿಲ್ಲ. ಇದಕ್ಕಾಗಿ ಕೃಷಿ ಇಲಾಖೆ ರೈತರೊಂದಿಗೆ ಸದಾ ಸಂಪರ್ಕದಲ್ಲಿದ್ದು,ಬೆಳೆ ಪದ್ಧತಿಗಳ ಬದಲಾವಣೆ ಸೇರಿದಂತೆ ಸರ್ಕಾರ ರೂಪಿಸುವ ಯೋಜನೆಗಳನ್ನು ಸಮಪರ್ಕವಾಗಿ ರೈತರಿಗೆ ತಲುಪಿಸಿ ಎಂದರು.
ಮಹಿಳಾ ಸಂಘಗಳು ಹಾಗೂ ಯುವಕರಿಗೆ ಸ್ವ ಉದ್ಯೋಗ ಕೈಗೊಳ್ಳುವ ತರಬೇತಿಗಳನ್ನು ಹೆಚ್ಚು ಆಯೋಜಿಸಿ. ವಿವಿಧ ಯೋಜನೆಗಳಡಿ ನೀಡುವ ಸಬ್ಸಿಡಿಗಳ ಬಗ್ಗೆ ಮಾಹಿತಿ ನೀಡಿ. ಗ್ರಾಮೀಣ ಭಾಗದಲ್ಲಿ ಸುಮಾರು 20- 25 ಲಕ್ಷ ರೂ ಉದ್ದಿಮೆಯನ್ನು 10 ರಿಂದ 20 ಮಹಿಳೆಯರು ಉದ್ಯೋಗ ಪಡೆಯಬಹುದು ಎಂದರು.
ಸಿ.ಎಸ್.ಆರ್ ಯೋಜನೆಯಡಿ ಪಬ್ಲಿಕ್ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿ. ಶೌಚಾಲಯಗಳು ಇಲ್ಲದ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ನೀರಿನ ಸಂಪರ್ಕದೊಂದಿಗೆ ಕ್ರಿಯಾ ಯೋಜನೆ ರೂಪಿಸಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಮಾಡಲು ಸ್ಥಳ ನಿಗದಿ ಪಡಿಸಿ ಯೋಜನಾ ವರದಿಯನ್ನು ನೀಡುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ 67 ಅಂಗನವಾಡಿ ಕೇಂದ್ರಗಳು, 98 ಶಾಲಾ ಶೌಚಾಲಯ, 90 ಆಟದ ಮೈದಾನ, 55 ಶಾಲಾ ಕಾಂಪೌಂಡ್, 4 ಶಾಲಾ ಅಡುಗೆ ಕೋಣೆ, 35 ಕಲ್ಯಾಣಿ ಪುನಶ್ಚೇತನ, 44 ಸ್ಮಶಾನ ಅಭಿವೃದ್ಧಿ, 171 ಗೋ ಕಟ್ಟೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 1913 ಕಾಮಗಾರಿಗಳನ್ನು ನಡೆಸಲಾಗಿದೆ. ಒಟ್ಟು 737 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 679 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ 58 ಘಟಕಗಳು ದುರಸ್ಥಿಯಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ ರಾಷ್ಟೀಯ ಸಾಮಾಜಿಕ ನೆರವು ಕಾರ್ಯಕ್ರಮದಲ್ಲಿ ಒಟ್ಟು 355204 ಫಲಾನುಭವಿಗಳಿಗೆ ಮಾಸಿಕ ರೂ. 3578.54 ಲಕ್ಷ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ಅಲಸಂದೆ, ಹುರುಳಿ, ಎಳ್ಳು, ತೊಗರಿ, ನೆಲಗಡಲೆ, ಟೊಮೋಟೋ, ಎಲೆಕೋಸು ಬೆಳೆಗಳನ್ನು ನೋಂದಣಿ ಮಾಡಿಕೊಳ್ಳಬಹುದು. ಜೊತೆಗೆ ಈ ಯೋಜನೆ ಅಡಿಯಲ್ಲಿ ಕಬ್ಬು ಬೆಳೆಯನ್ನು ಸೇರ್ಪಡೆ ಮಾಡಬೇಕೆಂದು ರೈತರ ಬೇಡಿಕೆ ಇದೆ ಎಂದರು.
ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಲಿಂಗಾನುಪಾತವು ಪುರುಷರು – 1000, ಮಹಿಳೆಯರು – 865 ಇದ್ದು ಮಹಿಳೆಯರ ಸಂಖ್ಯೆ ಕಡಿಮೆ ಇದೆ ಎಂದರು.
ಜಿಲ್ಲೆಯಲ್ಲಿ ಒಟ್ಟು – 59 ಸ್ಕಾನಿಂಗ್ ಸೆಂಟರ್ ಗಳಿವೆ ಅವುಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ ಭ್ರೂಣ ಹತ್ಯೆಗೆ ಪ್ರಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಎಫ್ ಐ ಆರ್ ದಾಖಲಾಗಿದೆ. ಇಲಾಖೆಯ ಜೊತೆಗೆ ಸಾರ್ವಜನಿಕರು ಕೂಡ ಭ್ರೂಣ ಹತ್ಯ ತಡೆಯಲು ಕೈಜೋಡಿಸಬೇಕು ಎಂದರು.
ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಸಾಧನೆಯಾಗಿದ್ದು, ಈ ಸಂಬಂಧ 4 ರಿಂದ 5 ಶಾಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದರು.
ಇಂಪ್ಲಿಮೆಂಟೇಷನ್ ಆಫ್ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ( Implimentaion of National food security act) ಅಡಿಯಲ್ಲಿ ಮಂಡ್ಯ ಜಿಲ್ಲೆಯ 34,133 ಅಂತ್ಯೋದಯ ಪಡಿತರ ಚೀಟಿಯ 1,38,695 ಫಲಾನುಭವಿಗಳು ಹಾಗೂ 4,34,649 ಆದ್ಯತಾ ಪಡಿತರ ಚೀಟಿಯ 13,97,252 ಫಲಾನುಭವಿಗಳಿದ್ದು, ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್, ಕೆ ಆರ್ ಪೇಟೆ ಶಾಸಕ ಹೆಚ್ ಟಿ ಮಂಜು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು,ಕೇಂದ್ರ ಸಚಿವರ ಒಎಸ್ ಡಿ ಕೃಷ್ಣಯ್ಯ, ಆಪ್ತ ಕಾರ್ಯದರ್ಶಿ ತೇಜಸ್ವಿ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.