ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ ಸ್ಟೀಲ್ ಕಂಬಿಗಳನ್ನು ಮುರಿದುಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಇಲ್ಲಿನ ವ್ಯಾಪಾರಿಗಳು ಕಂಬಿಗಳನ್ನು ಮುರಿದಿರುವುದನ್ನು ನೋಡಿ ಆತಂಕಗೊಂಡಿದ್ದಾರೆ. ಗಗನ ಚುಕ್ಕಿ ಜಲಪಾತೋತ್ಸವದ ಸಂದರ್ಭದಲ್ಲಿ ಪ್ರವಾಸಿಗರಿಗೆ ನೆರವಾಗಲೆಂದು ಮೆಟ್ಟಿಲುಗಳ ಮೂಲಕ ಕೆಳಗೆ ಇಳಿಯುವ ಎರಡೂ ಬದಿಗಳಲ್ಲೂ ಹಾಕಲಾಗಿದ್ದ ಸ್ಟೀಲ್ ಕಂಬಿಗಳನ್ನು ಮುರಿದುಹಾಕಿವೆ.
ಈ ಸಂಬಂಧ ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್ ಭೇಟಿ ನೀಡಿ ಆದಷ್ಟು ಬೇಗ ಕಂಬಿಗಳನ್ನು ದುರಸ್ತಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.





