ಮಂಡ್ಯ : ಒಳ ಮೀಸಲಾತಿಯಲ್ಲಿ ಅಲೆಮಾರಿ ಸೇರಿದಂತೆ ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಕೂಡಲೇ ಮೀಸಲಾತಿಗೆ ತಿದ್ದುಪಡಿ ತಂದು ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.
ವಿಧಾನಸಭೆಯ ಅಧಿವೇಶನ ಮುಗಿಯುವ ಕೊನೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಸಮುದಾಯದ ಒಳಮೀಸಲಾತಿಗೆ ತಾರ್ಕಿಕ ಮತ್ತು ತಾತ್ವಿಕ ಅಂತ್ಯ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಆ.೨೫ರಂದು ಆದೇಶ ಹೋರಡಿಸಿದ್ದು, ಆದೇಶದಲ್ಲಿ ಯಾವುದೇ ತಾರ್ಕಿಕ ಮತ್ತು ತಾತ್ವಿಕ ಅಂಶಗಳು ಕಾಣುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ಅವರು ೫ ವರ್ಗಗಳನ್ನಾಗಿ ವಿಂಗಡಿಸಿದ್ದು, ಎ ವರ್ಗದಲ್ಲಿ ಅತಿ ಹಿಂದುಳಿದ ಪರಿಶಿಷ್ಟ ಸಮುದಾಯದ ೫,೨೨,೦೯೯ ಜನಸಂಖ್ಯೆಯ ೫೯ ಜಾತಿಗಳಿಗೆ ಶೇ.೧ರಷ್ಟು, ಬಿ ವರ್ಗದಲ್ಲಿ ಹೆಚ್ಚು ಹಿಂದುಳಿದ ಪರಿಶಿಷ್ಟ ಸಮುದಾಯದ ೩೬,೬೯,೨೪೬ ಜನಸಂಖ್ಯೆಯ ೧೮ ಜಾತಿಗಳಿಗೆ ಶೇ.೬ರಷ್ಟು, ಸಿ ವರ್ಗದಲ್ಲಿ ಹಿಂದುಳಿದ ಪರಿಶಿಷ್ಟ ಸಮುದಾಯದ ೩೦,೦೮,೬೩೩ ಜನಸಂಖ್ಯೆಯ ೧೭ ಜಾತಿಗಳಿಗೆ ಶೇ.೫ರಷ್ಟು, ಡಿ ವರ್ಗದಲ್ಲಿ ಕಡಿಮೆ ಹಿಂದುಳಿದ ಪರಿಶಿಷ್ಟ ಸಮುದಾಯದ ೨೮,೨೪,೯೩೯ ಜನಸಂಖ್ಯೆಯ ೪ ಜಾತಿಗಳಿಗೆ ಶೇ.೪ರಷ್ಟು ಹಾಗೂ ಇ ವರ್ಗದಲ್ಲಿ ೪,೭೪,೯೫೪ ಜನಸಂಖ್ಯೆಯ ಮೂಲ ಜಾತಿಯ ಹೆಸರು ನಮೂದಿಸದ (ಎಕೆ, ಎಡಿ, ಎಎ) ಜಾತಿಗಳಿಗೆ ಶೇ.೨ರಷ್ಟು ಮೀಸಲಾತಿ ಶಿಫಾರಸ್ಸು ಮಾಡಿದ್ದಾರೆ ಎಂದು ವಿವರಿಸಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ, ಅಸಹಾಯ ಮತ್ತು ದುರ್ಬಲ ಸಮುದಾಯಗಳನ್ನು ವಿಂಗಡಿಸಿರುವ ನಾಗಮೋಹನ್‌ದಾಸ್ ವರದಿಯಲ್ಲಿ ಶೇ.೧ರಷ್ಟು ಮೀಸಲಾತಿ ನೀಡಿದ್ದರೂ ಇತರೆ ಪ್ರಬಲ ವರ್ಗಗಳನ್ನು ಸೇರಿಸಿದ ರಾಜ್ಯ ಸರ್ಕಾರ ಮಹಾಮೋಸ ಎಸಗಿದೆ. ಇದು ತಾತ್ವಿಕ ಮತ್ತು ತಾರ್ಕಿಕ ಎಂಬುದು ಸರಿಯೇ ಎಂದು ಪ್ರಶ್ನಿಸಿದರು.
ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸನ್ನು ತಿದ್ದುಪಡಿ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ ಮೂರು ವರ್ಗಗಳನ್ನಾಗಿ ವಿಂಗಡಿಸಿಕೊಂಡಿದೆ. ಶೇ ೬, ೬ ಮತ್ತು ೫ ರಷ್ಟು ಮೀಸಲಾತಿ ವಿಂಗಡಿಸಿ, ೧೦೧ ಜಾತಿಗಳ ಪೈಕಿ ೯೮ ಜಾತಿಗಳನ್ನು ಮಾತ್ರ ತೋರಿಸಿದ್ದು, ಕಾನೂನುಬದ್ಧ ಪರಿಶೀಲನೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಅನುಚ್ಛೇತ ೧೯೨ರ ಪ್ರಕಾರ ಜಾತಿಗಳನ್ನು ಸೇರಿಸಲು ಅಥವಾ ತೆಗೆಯಲು ಕೇಂದ್ರ ಸರ್ಕಾರಕ್ಕೆ ಹೊರತುಪಡಿಸಿ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಈ ಸಂಬಂಧ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ, ಸದರಿ ಮೀಸಲಾತಿಗೆ ನ್ಯಾಯಾಲಯ ತಡೆ ನೀಡಲು ಇದೋಂದು ಕಾರಣ ಸಾಕಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಆದೇಶಕ್ಕೆ ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ತಮ್ಮ ಆದೇಶ ಊರ್ಜಿತವಾಗಬಾರದೆಂದು ತಾವೇ ಬೇಕೆಂತಲೇ ಆದೇಶ ಮಾಡಿದಂತಾಗುತ್ತದೆ. ರಾಜ್ಯ ಸರ್ಕಾರ ತನ್ನ ಹಣಕಾಸಿನ ಮುಗ್ಗಟ್ಟಿನಿಂದ ಮೀಸಲಾತಿ ಜಾರಿಯಾಗದಂತೆ ತಡೆಯಲೆಂದೇ ಒಳಮೀಸಲಾತಿ ಆದೇಶ ಮಾಡಿದಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪರಮಾನಂದ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ ಹಾಜರಿದ್ದರು.





