ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.
ಜಲಾಶಯ ಭರ್ತಿಯಂಚಿಗೆ ತಲುಪಿರುವ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿಗೆ 29 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದಂತೆ ಹೊರಹರಿವನ್ನು ಸಹ ಹೆಚ್ಚಳ ಮಾಡಲಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಕೆಆರ್‌ಎಸ್ ಜಲಾಶಯ 121 ಅಡಿ ಭರ್ತಿಯಾಗಿದ್ದು, 124.80 ಅಡಿ ಗರಿಷ್ಠ ಮಟ್ಟ ಹೊಂದಿದೆ. ಡ್ಯಾಂಗೆ 20,315 ಕ್ಯೂಸೆಕ್ಸ್ ಒಳಹರಿವಿದ್ದು, ಸಂಜೆ ಅಥವಾ ನಾಳೆ ಬೆಳಿಗ್ಗೆ 50 ಸಾವಿರ ಕ್ಯೂಸೆಕ್ಸ್‌ಗೆ ಏರಿಕೆ ಆಗುವ ಸಾಧ್ಯತೆಯಿದೆ.
ಕೆಆರ್‌ಎಸ್ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಶ್ರೀರಂಗಪಟ್ಟಣ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಬಲಮುರಿ, ಎಡಮುರಿ, ಸಂಗಮ, ಗೋಸಾಯಿ ಘಾಟ್‌ನಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಿಮಿಷಾಂಭ, ಶ್ರೀರಂಗನಾಥ ದೇವಸ್ಥಾನದ ಸ್ನಾನಘಟ್ಟಗಳಿಗೂ ನಿರ್ಬಂಧ ವಿಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.





