ಶೀಘ್ರದಲ್ಲೇ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭ: ಡಾ: ಕುಮಾರ

ಮಂಡ್ಯ:  ಮದ್ದೂರು ತಾಲ್ಲೂಕಿನ ಅತಗೂರು ಹೋಬಳಿಯ ಹೂತಗೆರೆ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಮೊದಲ ಸರ್ಕಾರಿ ಗೋಶಾಲೆಯನ್ನು ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾಣಿ ದಯಾ ಸಂಘ ಸಮಿತಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಶಾಲೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಿ , ಪ್ರಾಣಿಗಳಿಗೆ ವಸತಿ, ಕುಡಿಯುವ ನೀರು, ಮೇವಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೂತಗೆರೆ ಗ್ರಾಮದ ಗೋಶಾಲೆಯು 10 ಎಕರೆ ವಿಸ್ತೀರ್ಣದಲ್ಲಿದ್ದು, ಇದರ ಸುತ್ತ ಕಾಂಪೌಂಡ್ ಅಥವಾ ಬೇಲಿ ನಿರ್ಮಿಸಿ ಸ್ಥಳದ ರಕ್ಷಣೆ ಮಾಡಿಕೊಳ್ಳಬೇಕು ಇಲ್ಲಾವದಲ್ಲಿ ಒತ್ತುವರಿಯಾಗುವ ಸಾಧ್ಯತೆ ಹೆಚ್ಚು. ಗೋಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಲು ಯೋಜನೆ ಸಿದ್ಧಪಡಿಸಿ ಎಂದರು.

ಜಿಲ್ಲೆಯಲ್ಲಿ ಬೀದಿ ನಾಯಿಗಳ ಹವಾಳಿ ಕಡಿಮೆಗೊಳಿಸಲು ಎ.ಬಿ.ಸಿ (Animal birth control) ಚಿಕಿತ್ಸೆಗಾಗಿ ಸ್ಥಳೀಯ ಸಂಸ್ಥೆಗಳು ಅನುದಾನ ಮೀಸಲಿಡಿ. ಪ್ರತ್ಯೇಕವಾಗಿ ಸ್ಥಳ ಗುರುತಿಸಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಬೇರೆ ದೇಶಗಳಿಗಿಂತ ಭಾರತ ದೇಶದಲ್ಲಿ ರೇಬೀಸ್ ರೋಗಿಗಳ ಸಂಖ್ಯೆ ಹೆಚ್ಚು ಇದಕ್ಕೆ ಮುಖ್ಯ ಕಾರಣ ಬೀದಿ ನಾಯಿಯ ಕಡಿತ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಂಡ್ಯ ಜಿಲ್ಲೆಯಲ್ಲಿ ಬೀದಿ ನಾಯಿ ಕಡಿತಕ್ಕೆ ಒಳಗಾಗಿರುವವರ ಸಂಖ್ಯೆ ಹೆಚ್ಚು, ಈ ಹಿನ್ನಲೆಯಲ್ಲಿ ಎ.ಬಿ.ಸಿ ಚಿಕಿತ್ಸೆ ಕೆಲಸ ಚುರುಕುಗೊಳಿಸಿ ಎಂದರು.

ಖಾಸಗಿಯಾಗಿ ಕಾರ್ಯನಿರ್ವಹಿಸುವ ಗೋಶಾಲೆಗಳಿಗೆ ಪ್ರತಿ ಗೋವಿಗೆ ಪ್ರತಿದಿನಕ್ಕೆ ರೂ 17.30 /- ರಂತೆ ಸಹಾಯಧನ ನೀಡಲಾಗುವುದು. ಈ ಹಿನ್ನಲೆಯಲ್ಲಿ ಸಹಾಯಧನ ಕೋರಿ ಮನವಿ ಸಲ್ಲಿಸಿರುವ ಮಂಡ್ಯ ತಾಲ್ಲೂಕು ಸಾತನೂರಿನಲ್ಲಿರುವ ಶ್ರೀ ಅದಿಚುಂಚನಗಿರಿ ಗೋಶಾಲೆ- 159, ನಾಗಮಂಗಲ ತಾಲ್ಲೂಕಿನ ಅದಿಚುಂಚನಗಿರಿ ಗೋಶಾಲೆ- 100, ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಶ್ರೀ ಧ್ಯಾನ ಪೌಂಡೇಶನ್ ಗೋರಕ್ಷಾ ಟ್ರಸ್ಟ್ ನ ಚೈತ್ರ ಗೋಶಾಲೆ- 891, ಕೆರೆತೊಣ್ಣೂರು ಯತಿರಾಜ್ ಸೇವಾ ಟ್ರಸ್ಟ್- 116, ಮದ್ದೂರು ತಾಲ್ಲೂಕಿನ ಹರಕನಹಳ್ಳಿಯಲ್ಲಿರುವ ಕೃಷ್ಣ ಗೀರ್ ಗೋಶಾಲೆ ಟ್ರಸ್ಟ್- 128, ಹೊಸಗಾಮಿ ಗ್ರಾಮದ ಗಣೇಶ್ ದೇಶಿ ಗೋಶಾಲೆ ಟ್ರಸ್ಟ್ -202, ಕದಲೂರಿನಲ್ಲಿರುವ ನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್- 53‌ ಹಾಗೂ ಮಂಡ್ಯ ತಾಲ್ಲೂಕಿನ ಕಾಮದೇನು ಗೋ ಸಂರಕ್ಷಣಾ ಟ್ರಸ್ಟ್- 22 ಸಹಾಯಧನ ಮಂಜೂರಾತಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ:ಸುರೇಶ್, ಮಂಡ್ಯ ನಗರಸಭೆ ಆಯುಕ್ತ ಮಂಜುಮಾಥ್ , ವಿವಿಧ ಗೋಶಾಲೆಯ ಮುಖ್ಯಸ್ಥರು ಉಪಸ್ಥಿತರಿದ್ದರು.