Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಹೆಂಡತಿ ಮೊಬೈಲ್‌ನಲ್ಲಿ ಮಾತಾಡ್ತಾಳೆ ಅಂತ ಮಕ್ಕಳನ್ನು ಕೊಂದ ತಂದೆ

ಮಂಡ್ಯ : ಕೌಟುಂಬಿಕ ಕಲಹ ಹಿನ್ನೆಲೆ ಸ್ವಂತ ತಂದೆಯೇ ತನ್ನ ಇಬ್ಬರು ಮಕ್ಕಳ ಕತ್ತು ಸೀಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶ್ರೀಕಾಂತ್ ಬಂಧಿತ ಆರೋಪಿ. ಈತ ಕಲಬುರಗಿ ಜಿಲ್ಲೆಯ ಗಾಣಗಪುರದವನಾಗಿದ್ದು, ಲಕ್ಷ್ಮಿ ಎಂಬಾಕೆಯನ್ನು ವರಿಸಿದ್ದ. ಮದುವೆಯಾದಾಗಿನಿಂದ ಇವರಿಬ್ಬರ ಮಧ್ಯೆ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇತ್ತು. ಬುಧವಾರ ಈತ ತನ್ನ ತಂದೆ-ತಾಯಿಯೊಂದಿಗೆ ಜಗಳ ಮಾಡಿಕೊಂಡು ಶ್ರೀರಂಗಪಟ್ಟಣ ಸಮೀಪದ ಮರಳಗಾಲ ಗ್ರಾಮದ ವಿರೂಪಾಕ್ಷ ಎಂಬವರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಅತ್ತೆ-ಮಾವನ ಮನೆಗೆ ಬಂದಿದ್ದ. ಅಲ್ಲದೇ ನಮಗೆ ಇಲ್ಲಿಯೇ ಕೆಲಸ ಕೊಡಿಸಿ, ಕೆಲಸ ಮಾಡಿಕೊಂಡು ಇಲ್ಲಿಯೇ ಇರುತ್ತೇವೆ ಎಂದು ಶ್ರೀಕಾಂತ್ ಹೇಳಿದ್ದ.

ಇದಕ್ಕೆ ಒಪ್ಪಿಕೊಂಡ ಅವರ ಅತ್ತೆ-ಮಾವ ಊಟ ಮಾಡಿ ಮಲಗಿದ್ದರು. ಗುರುವಾರ ಬೆಳಗ್ಗಿನ ಜಾವ ಏಕಾಏಕಿ ಶ್ರೀಕಾಂತ್ ತನ್ನ ಹೆಂಡತಿಗೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಅಲ್ಲೇ ಪಕ್ಕದಲ್ಲಿದ್ದ ಆದರ್ಶ್ (4) ಮತ್ತು ಅಮೂಲ್ಯ (2) ಎಂಬ ತನ್ನ ಇಬ್ಬರು ಮಕ್ಕಳ ಕತ್ತು ಸೀಳಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಕೊಲೆ ಮಾಡಿದ ಪಾಪಿ ಶ್ರೀಕಾಂತ್ ಪರಾರಿಯಾಗಿ ತನ್ನ ಹುಟ್ಟೂರಾದ ಜೇವರ್ಗಿಗೆ ಬಂದು ಯಾವುದೇ ಪಾಪಪ್ರಜ್ಞೆ ಇಲ್ಲದೇ ಕುಡಿದು ಮಲಗಿದ್ದ. ಟಿವಿಯಲ್ಲಿ ಹತ್ಯೆ ವಿಚಾರ ತಿಳಿದ ಈತನ ತಂದೆ-ತಾಯಿ ಮನೆಯಲ್ಲಿ ಶ್ರೀಕಾಂತ್ ಇರುವಿಕೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿ ಶ್ರೀಕಾಂತ್‌ನನ್ನು ಜೇವರ್ಗಿಯಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆಯ ಅಸಲಿ ಸತ್ಯವನ್ನು ಶ್ರೀಕಾಂತ್ ಬಾಯಿ ಬಿಟ್ಟಿದ್ದಾನೆ. ತನ್ನ ಹೆಂಡತಿ ಯಾವಾಗಲೂ ಯಾರದ್ದೋ ಜೊತೆ ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದಳು. ಈ ಹಿನ್ನೆಲೆ ಪತ್ನಿಯ ಶೀಲ ಶಂಕಿಸಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಪ್ರತಿದಿನ ಲಕ್ಷ್ಮಿ ಶೀಲ ಶಂಕಿಸಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಇಬ್ಬರು ಮಕ್ಕಳು ನನ್ನದಲ್ಲ ಎಂದು ಸದಾ ಮಕ್ಕಳು ಮತ್ತು ಹೆಂಡತಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!