ಶ್ರೀರಂಗಪಟ್ಟಣ : ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಬೆಳಗೊಳ ಹೋಬಳಿಯ ವಿವಿಧ ಗ್ರಾಮಗಳ ರೈತರು ಕೆಆರ್‌ಎಸ್‌ನ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗೊಳ ರೈತ ಮುಖಂಡ ಸುನೀಲ್ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಮುಖಂಡರು ಕಚೇರಿ ಮುಂದೆ ಜಮಾಯಿಸಿ ನಾಲೆಗಳಿಗೆ ನೀರು ಹರಿಸದ ಸರ್ಕಾರದ ಕ್ರಮವನ್ನು ಖಂಡಿಸಿದರು.
ಕೆಆರ್‌ಎಸ್ ಜಲಾಶಯ ಭರ್ತಿಯಾದರೂ ನಾಲೆಗಳಿಗೆ ನೀರು ಹರಿಸದೆ, ಕಟಾವಿನ ಹಂತಕ್ಕೆ ಬಂದ ಕಬ್ಬು ಇತರ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳು ನೀರಿಲ್ಲದೆ ಬಾಡುತ್ತಿವೆ. ಈ ಭಾಗದಲ್ಲಿ ತಿಂಗಳಿನಿಂದ ಸರಿಯಾಗಿ ಮಳೆ ಬಿದ್ದಿಲ್ಲ. ಆಗೊಮ್ಮೆ ಈಗೊಮ್ಮೆ ಸೋನೆ ಸುರಿದಿದ್ದು ಬಿಟ್ಟರೆ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುವಂತಹ ಮಳೆ ಬಂದಿಲ್ಲ. ವಿಶ್ವೇಶ್ವರಯ್ಯ ನಾಲೆ, ಸಿಡಿಎಸ್ ಹಾಗೂ ವಿರಿಜಾ ನಾಲೆಯ ವ್ಯಾಪ್ತಿಯ ಸಂಪರ್ಕ ನಾಲೆಯಲ್ಲಿ ನೂರಾರು ಎಕರೆ ಕೃಷಿ ಜಮೀನುಗಳಿಗೆ ಕಬ್ಬು ಇತರ ಬೆಳೆಗಳಿಗೆ ನೀರಿನ ಅವಶ್ಯಕತೆಯಿದೆ. ಬೆಳೆಗಳು ನೀರಿಲ್ಲದೆ ಬಾಡುವ ಪರಿಸ್ಥಿತಿ ಎದುರಾಗಿದ್ದು, ಕೂಡಲೆ ನೀರು ಹರಿಸಿ ಬೆಳೆ ಉಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿ ನೀರಾವರಿ ಇಲಾಖೆಯ ಎಇಇ ಕಿಶೋರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹರೀಶ್, ವಿಷಕಂಠು, ವಿನಯ್, ಸಿದ್ದಪ್ಪ, ದಾಸೇಗೌಡ, ರವಿ, ಪಾಪಯ್ಯ, ಶಿವಕುಮಾರ್ ಸೇರಿದಂತೆ ಇತರ ರೈತ ಮುಖಂಡರು ಹಾಜರಿದ್ದರು.





