Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಂಡ್ಯ | ಬಾಲ್ಯ ವಿವಾಹ ತಡೆಗಟ್ಟುವಲ್ಲಿ ವಿಫಲ ; ಅಧಿಕಾರಿಗಳಿಗೆ ನೋಟಿಸ್‌ ಜಾರಿ

ಮಂಡ್ಯ : ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ 57 ಬಾಲ್ಯ ವಿವಾಹ ನಡೆದಿರುವ ಬಗ್ಗೆ ಎಫ್.ಐ.ಆರ್ ದಾಖಲಿಸಲಾಗಿದೆ. ಬಾಲ್ಯ ವಿವಾಹ ನಡೆಯುವ ಮೊದಲೇ ಅಧಿಕಾರಿಗಳು ಪತ್ತೆ ಹಚ್ಚಿ ತಡೆಗಟ್ಟಬೇಕಿತ್ತು. ಬಾಲ್ಯ ವಿವಾಹವಿಫಲರಾದ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮದುವೆಯ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆಯಾ ಗ್ರಾಮದ ಪಿ.ಡಿ.ಓ, ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ಬರುತ್ತಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರೌಢಶಾಲೆಯ ಹೆಣ್ಣು ಮಗು 3 ದಿನ ಕ್ಕಿಂತ ಹೆಚ್ಚು ಶಾಲೆಗೆ ಬರುತ್ತಿಲ್ಲ ಎಂದರೆ ಪರಿಶೀಲನೆ ನಡೆಸಬೇಕು ಎಂದರು.

ಮಂಡ್ಯ ಜಿಲ್ಲೆಯು ತಲಾದಯದಲ್ಲಿ ಆರನೇ ಸ್ಥಾನದಲ್ಲಿದೆ. ತಲಾದಯ ಪ್ರತಿ ವರ್ಷಕ್ಕೆ ಅಂದಾಜು ರೂ 2,32,000/- ಇದೆ. ಆದರೂ ಸಹ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದೆ ಎಂದರೆ ಯೋಜನೆ ಮಾಡುವ ಸಂಗತಿಯಾಗಿದೆ. ಬಾಲ್ಯ ವಿವಾಹ ನಡೆದಿರುವ 5 ವರ್ಷಗಳ ಪ್ರಕರಣಗಳ ಬಗ್ಗೆ ಸಾಮಾಜಿಕ ಅಧ್ಯಯನ ‌ನಡೆಸಿ‌ ಇದರಿಂದ ಸಮಸ್ಯೆಯ ಮೂಲವನ್ನು ತಿಳಿಯಬಹುದು ಎಂದರು.

2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದಿರುವ 57 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಬಹಳಷ್ಟು ನಡೆದಿರುವುದು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯರದು. ಬಾಲ್ಯ ವಿವಾಹ ನಡೆದರೆ ವಿದ್ಯಾರ್ಥಿನಿಯರ ಶಿಕ್ಷಣ ಹಕ್ಕು ಕಸೆದುಕೊಂಡಂತೆ ಎಂಬುದು ತಿಳಿದಿರಲಿ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರೌಢಶಾಲಾ ಹೆಣ್ಣು ಮಕ್ಕಳ ಹಾಜರಾತಿಯಲ್ಲಿ ಕೊರತೆ ಉಂಟಾದರೆ ತಕ್ಷಣ ಪರಿಶೀಲನೆ ನಡೆಸಿ. ತಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಚುರುಕಾಗಿ ಕಾರ್ಯನಿರ್ವಹಿಸಲು ತಿಳಿಸಿ ಇದರಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯದಂತೆ ತಡೆಗಟ್ಟಬಹುದು. ಗ್ರಾಮಗಳಲ್ಲಿ ನಡೆಯುವ ಮಕ್ಕಳ ಗ್ರಾಮ ಸಭೆಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಸ್ವಾಮಿ, ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!