ಮಂಡ್ಯ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ೨೦೨೫-೨೬ನೇ ಸಾಲಿನ ಭತ್ತ ಮತ್ತು ರಾಗಿ ಖರೀದಿಗೆ ಸಮಯಾವಕಾಶ ವಿಸ್ತರಿಸಿದ್ದು, ಭತ್ತ ಖರೀದಿಗೆ ಡಿ.೩೧ರ ವರೆಗೆ ಹಾಗೂ ರಾಗಿ ಖರೀದಿಗೆ ಡಿ.೧೫ರ ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ೨೦೨೫-೨೬ ನೇ ಸಾಲಿನ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಾಗೂ ೨೦೨೪-೨೫ ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಕೊಬ್ಬರಿ ಸರಬರಾಜು ಮಾಡಿದ ರೈತರಿಗೆ ಹಣ ಪವತಿಸಲು ಬಾಕಿಯಿರುವ ಸಂಬಂಧ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
೨೦೨೫-೨೬ ನೇ ಸಾಲಿಗೆ ಸಂಬಂಧಪಟ್ಟಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ನೋಂದಣಿಗಾಗಿ ಜಿಲ್ಲೆಯಲ್ಲಿ ೧೭ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ನೇರವಾಗಿ ನೋಂದಣಿ ಕೇಂದ್ರಗಳಲ್ಲಿ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಈವರೆಗೂ ಭತ್ತ ಖರೀದಿಗಾಗಿ ೧೮೨ ರೈತರು ೫೯೫೩.೦೦ ಕ್ವಿಂಟಾಲ್ ಪ್ರಮಾಣದಲ್ಲಿ ಭತ್ತಕ್ಕೆ ನೋಂದಾಯಿಸಿಕೊಂಡಿರುತ್ತಾರೆ. ರಾಗಿ ಖರೀದಿಗಾಗಿ ೧೩,೦೪೭ ರೈತರು ೩,೦೮,೬೬೬ ಕ್ವಿಂಟಾಲ್ ಪ್ರಮಾಣದ ರಾಗಿಗೆ ನೋಂದಾಯಿಸಿಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವು ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ ಮತ್ತು ರಾಗಿ ಖರೀದಿಸಲು ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ರೂ ೨೩೬೯, ಗ್ರೇಡ್- ಎ ಭತ್ತಕ್ಕೆ ರೂ ೨೩೮೯ ಹಾಗೂ ರಾಗಿ ಪ್ರತಿ ಕ್ವಿಂಟಾಲ್‌ಗೆ ರೂ ೪೮೮೬ ನಿಗಽಪಡಿಸಲಾಗಿರುತ್ತದೆ. ಜಿಲ್ಲೆಯ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಬ್ಬು ಸರಬರಾಜು ಮಾಡುವ ರೈತರಿಗೆ ಪಾವತಿ ಹಣವನ್ನು ಕಬ್ಬು ಸರಬರಾಜು ಮಾಡಿದ ೧೪ ದಿನದೊಳಗೆ ಹಣ ಪಾವತಿಸುವುದು ಕಡ್ಡಾಯವಾಗಿದ್ದು. ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ೧೪ ದಿನದೊಳಗೆ ಹಣ ಪಾವತಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ೨೦೨೪-೨೫ ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಕೊಬ್ಬರಿ ಸರಬರಾಜು ಮಾಡಿದ ರೈತರಿಗೆ ಬಾಕಿಯಿರುವ ಪಾವತಿ ಹಣವನ್ನು ಶೀಘ್ರದಲ್ಲೇ ಪಾವತಿಸಬೇಕು ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





