Mysore
21
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಬೆಳೆ ಸಮೀಕ್ಷೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

District Collector instructs to expedite crop survey

ಮಂಡ್ಯ : ಬೆಳೆ ಸಮೀಕ್ಷೆಯ ವರದಿಯನ್ನು ಆಧರಿಸಿ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ವಿಸ್ತೀರ್ಣ ಎಣಿಕೆ ಕಾರ್ಯ, ಎನ್.ಡಿ.ಆರ್.ಎಫ್ ಸಹಾಯಧನ, ಪ್ರಕೃತಿ ವಿಕೋಪದಲ್ಲಿ ಬೆಳೆ ಹಾನಿ ವರದಿ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ಬೆಳೆ ಸಮೀಕ್ಷೆ ಕೆಲಸಗಳು ನಿಖರವಾಗಿರಬೇಕು ಹಾಗೂ ಸಮೀಕ್ಷೆ ಕೆಲಸಗಳನ್ನು ಚುರುಕುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಸಮೀಕ್ಷೆಯಲ್ಲಿ ನೀಡಿದ ಗುರಿ ತಲುಪದ ಪಿ. ಆರ್ – ಪ್ರೈವೇಟ್ ರೆಸಿಡೇಂಟ್ಸ್ ಅವರನ್ನು ಬದಲಾವಣೆ ಮಾಡಿ ಹೊಸಬರನ್ನು ಆಯ್ಕೆ ಮಾಡಿಕೊಳ್ಳಿ ಎಂದರು.

ಜಿಲ್ಲೆಯು 2024-25 ನೇ ಸಾಲಿನಲ್ಲಿ ಶೇ 91.55 ರಷ್ಟು ಪೂರ್ವ ಮುಂಗಾರು, ಶೇ 96.34 ರಷ್ಟು ಮುಂಗಾರು, ಶೇ 97.68 ರಷ್ಟು ಹಿಂಗಾರು ಹಾಗೂ ಶೇ 95.84 ರಷ್ಟು ಬೇಸಿಗೆ ಹಂಗಾಮಿನಲ್ಲಿ ನಡೆದ ಸಮೀಕ್ಷೆಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಗಣನೀಯವಾಗಿ ಹೆಚ್ಚಿನ ಪ್ರದೇಶದಲ್ಲಿ ಬೆಳೆ ವಿಮೆ ನೊಂದಣಿಯಾಗಿದ್ದು, 2023-24 ನೇ ಸಾಲಿನಲ್ಲಿ ವಿವಿಧ ವಿಮಾ ವಿಪತ್ತುಗಳಡಿಯಲ್ಲಿ 39.09 ಕೋಟಿ ರೂ ಗಳಷ್ಟು ವಿಮಾ ಪರಿಹಾರಧನ ಪಾವತಿಯಾಗಿದೆ. 2025 ರಲ್ಲಿ 3708 ರೈತರು ವಿಮೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನು ಹೆಚ್ವಿನ ಸಂಖ್ಯೆಯಲ್ಲಿ ರೈತರು ನೊಂದಾಯಿಸಿಕೊಳ್ಳುವಂತೆ ಪ್ರಚಾರ ನೀಡಿ ಎಂದರು.

ಬೆಳೆ ವಿಮಾ ಯೋಜನೆ ಕುರಿತು ಇಲಾಖಾ ರೈತ ಸಂಜೀವಿನಿ ವಾಹನಗಳಲ್ಲಿ, ಆಟೋರಿಕ್ಷಾಗಳ ಮೂಲಕ, ಕಸ ವಿಲೇವಾರಿ ವಾಹನ, KSRTC ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್ ಅಳವಡಿಸಲಾಗಿದ್ದು, ಹಾಲಿನ ಡೈರಿ, ಸೊಸೈಟಿ, ಸಂತೆಗಳಲ್ಲಿ ಹಾಗೂ ಹೆಚ್ಚಿನ ರೈತರು ಸೇರುವ ಸ್ಥಳಗಳಲ್ಲಿ ನೇರವಾಗಿ ಸಂಪರ್ಕ ಮಾಡಿ ವಿಮಾ ನೊಂದಣಿ ಬಗ್ಗೆ ಮಾಹಿತಿ ನೀಡಿ ಎಂದರು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿ. ಎಂ. ಎಫ್. ಎಂ.ಇ) ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆವಿಗೆ 258 ರೈತ ಉದ್ದಿಮೆದಾರರಿಗೆ ಒಟ್ಟಾರೆ 65.45 ಕೋಟಿ ರೂಗಳಷ್ಟು ಸಾಲ ಹಾಗೂ 21.7 ಕೋಟಿ ರೂಗಳಷ್ಟು ಸಹಾಯಧನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಪಿ. ಎಂ. ಎಫ್. ಎಂ.ಇ ಯೋಜನೆಗೆ ಸದರಿ ಸಾಲಿನಲ್ಲಿ 250 ಗುರಿ ನಿಗದಿಯಾಗಿದ್ದು, ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ತೋಟಗಾರಿಕೆ, ಮೀನುಗಾರಿಕೆ ಹಾಗೂ ಕೃಷಿ ಇಲಾಖೆಗಳು ಒಟ್ಟಿಗೆ ಸಭೆ ನಡೆಸಿ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರದಲ್ಲಿ ಯೋಜನೆ ಸಿದ್ಧಪಡಿಸಿ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಮಾತನಾಡಿ, ಆಹಾರ ಸಂಸ್ಕರಣೆಗೆ ಸಂಬಂದಿಸಿದಂತೆ ಎನ್.ಆರ್.ಎಲ್. ಎಂ. ಸ್ವಸಹಾಯ ಸಂಘಗಳಿಗೆ ದೇಶಿ ಎಣ್ಣೆಯ ಗಾಣಗಳು, ಮದ್ದೂರು ಒಡೆ, ಚಿಪ್ಸ್ ತಯಾರಿಕೆ ಸೇರಿದಂತೆ ವಿವಿಧ ಘಟಕಗಳನ್ನು ಪ್ರಾರಂಭಿಸಬಹುದು. ಯೋಜನೆ ಸಿದ್ಧಪಡಿಸಿದರೆ ನುರಿತ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರ ಸಂಸದರಾದ ಹೆಚ್.ಡಿ ಕುಮಾರಸ್ವಾಮಿಯವರು ಜುಲೈ 4 ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಸಲಿದ್ದು, ಈ ಸಂಬಂಧ ಅಧಿಕಾರಿಗಳು ಸಿದ್ಧಪಡಿಸಿರುವ ಅನುಪಾಲನ ವರದಿಯನ್ನು ಪರಿಶೀಲಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ರೂಪಶ್ರೀ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Tags:
error: Content is protected !!