ಮಂಡ್ಯ : ಜಿಲ್ಲೆಯಲ್ಲಿ ಜಲ್-ಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರವೆಸಗಲಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೋಟ್ಯಾಂತರ ರೂ ಲೂಟಿ ಹೊಡೆಯುತ್ತಿದ್ದಾರೆ ಎಂದು ಕಿರಣ್‌ಕುಮಾರ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದರಿ ಯೋಜನೆ ಜಾರಿಯಾಗುವ ಮುನ್ನವೇ ಜಿಲ್ಲೆಯ ಶೇ95 ರಷ್ಟು ಕುಟುಂಬಗಳಿಗೆ ನಳ ಸಂಪರ್ಕವಿದ್ದರೂ ಶೇ.53ರಷ್ಟು ಮಾತ್ರ ಸಳ ಸಂಪರ್ಕವಿದೆಯೆಂದು ಸುಳ್ಳು ಮಾಹಿತಿ ನೀಡಿ ಸುಮಾರು 1100 ರಿಂದ 1200 ಕೋಟಿ ರೂ ವರೆಗೆ ಹಣ ಮಂಜೂರು ಮಾಡಿಸಿ ಲೂಟಿ ಮಾಡುವ ದಂಧೆ ಮಾಡಲಾಗುತ್ತಿದೆ ಎಂದು ದೂರಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮನಸೋ ಇಚ್ಛೆ ಅಂದಾಜು ಪಟ್ಟಿ ತಯಾರಿಸಿ 46 ಪಂಚಾಯಿತಿಗಳ ಪೈಕಿ ಇರುವ 175 ಜನವಸತಿ ಪ್ರದೇಶಗಳಿಗೆ 287 ಕಾಮಗಾರಿಗಳನ್ನು ದಾಖಲಿಸಿಕೊಂಡಿದ್ದು, ಇದುವರೆಗೆ ಯಾವುದೇ ರೀತಿ ಜಿಎಸ್‌ಟಿ ಕಡಿತ ಮಾಡಲಾಗದೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿದೆ ಎಂದು ದೂರಿದರು.
ನಳ ಸಂಪರ್ಕ ಇಲ್ಲದ ಮಾಹಿತಿ ಯಾವ ಅಧಿಕಾರಿಗಳ ಬಳಿಯೂ ಇಲ್ಲವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಅಂದಾಜು ಪಟ್ಟಿ ಮಾಡಿರುವುದಿಲ್ಲ, ಮೂರನೇ ವ್ಯಕ್ತಿ ತಪಾಸಣೆ ಸಂಸ್ಥೆಯು ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡದೇ ಏಕಾಏಕಿ ವರದಿ ನೀಡಿದ್ದು, ಸದರಿ ಸಮೀಕ್ಷೆಗೆ 20 ಕೋಟಿ ರೂ.ಗಿಂತಲು ಹೆಚ್ಚು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ್ದಾರೆ ಎಂದು ಹೇಳಿದರು.
ಗುತ್ತಿಗೆದಾರರು ಕಾಮಗಾರಿ ಮಾಡದೇ ಅರ್ಹತೆ ಇಲ್ಲದವರಿಗೆ ಮತ್ತು ರಾಜಕಾರಣಿಗಳ ಹಿಂಬಾಲಕರಿಗೆ ಅಲ್ಲದೇ ಸ್ವತಃ ಇಂಜಿನಿಯರ್‌ಗಳೇ ಉಪಗುತ್ತಿಗೆ ಪಡೆದು ಕೆಲಸ ಮಾಡಿಸುವ ಮೂಲಕ ಕಳಪೆ ಕಾಮಗಾರಿ, ಕಮಿಷನ್ ದಂಧೆ ನಡೆಯಲು ಕಾರಣವಾಗಿದ್ದು, ಸಮರ್ಪಕವಾಗಿ ಯೋಜನೆಯ ಅನುಷ್ಠಾನ ಮಾಡಲಾಗುತ್ತಿಲ್ಲವೆಂದು ಗಂಭೀರ ಆರೋಪ ಮಾಡಿದರು.
ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ದೂರಿದ ಹಿನ್ನಲೆ, ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ತನಿಖಾ ತಂಡ ರಚಿಸಲು ಮನವಿ ಮಾಡಿದ್ದಾರೆ, ಒಂದು ವೇಳೆ ತನಿಖಾ ತಂಡ ರಚಿಸಿ, ಕ್ರಮ ವಹಿಸದೇ ಇದ್ದರೆ, ಲೋಕಾಯುಕ್ತ ಹಾಗೂ ಸಿಬಿಐಗೆ ದಾಖಲೆ ಸಮೇತ ದೂರು ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜಣ್ಣ, ಸಿವರಾಮ್, ಆನಂದ್ ಕೊಮ್ಮೇರಹಳ್ಳಿ ಇದ್ದರು.





