ಮಂಡ್ಯ : ರಾಜ್ಯ ಸರ್ಕಾರದ ಗಮನ ಐದು ಗ್ಯಾರಂಟಿ, ಲೋಕಸಭಾ ಚುನಾವಣೆ ಮೇಲೆ ಮಾತ್ರ ಇದೆ. ಕಾವೇರಿ ವಿಚಾರದ ಬಗ್ಗೆ ಸರ್ಕಾರಕ್ಕೆ ಗಮನ ಇಲ್ಲ. ಇವರು ಈವರೆಗೆ ಏನು ಮಾತನಾಡಿಲ್ಲ, ಬರೀ ಗ್ಯಾರಂಟಿ ಜಾತ್ರೆಯನ್ನು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದ ಬಗ್ಗೆ ಗಮನ ಇದ್ದಿದ್ದರೆ ಪ್ರಾಧಿಕಾರದ ಮುಂದೆ ವಸ್ತುಸ್ಥಿತಿಯನ್ನು ಸರಿಯಾಗಿ ವಿವರಿಸುತ್ತಿದ್ದರು. ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ ಹಾಗೆ ಮಾಡಿದ್ದಾರೆ. ಎಲ್ಲರೂ ವಿರೋಧ ಮಾಡಿದ ಬಳಿಕ ಸರ್ವಪಕ್ಷ ಸಭೆ ಕರೆದರು. ಸಭೆಯಲ್ಲಿ ನೀರು ಬಿಡಲ್ಲ ಎಂದು ಹೇಳಿ ಈಗ ನೀರು ಬಿಡುತ್ತಿದ್ದಾರೆ. ಮೋದಿ ಅವರನ್ನು ವಿರೋಧ ಮಾಡಲು ಕರ್ನಾಟಕದ ಜನರನ್ನು ರಾಜ್ಯ ಸರ್ಕಾರ ಬಲಿ ಕೊಡುತ್ತಿದೆ. ಜನರ ಬಗ್ಗೆ ಇವರಿಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಕೇಂದ್ರಕ್ಕೆ ಹೋಗುವ ಯೋಚನೆ ಮಾಡುತ್ತಿರಬಹುದು. ಅದಕ್ಕೆ ಐದು ಗ್ಯಾರಂಟಿ ಗ್ಯಾರಂಟಿ ಎಂದು ನಿಂತಿದ್ದಾರೆ. ವರ್ಗಾವಣೆ, ಲಂಚ ದಂಧೆ ಬಿಟ್ಟು ಇವರಿಗೆ ಏನು ಗೊತ್ತಿಲ್ಲ. ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಹೇಳುತ್ತಿದ್ದರು. ಇವರು 80% ಕಮಿಷನ್ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರವನ್ನು ಸಿದ್ದಪಡಿಸುವ ಬದಲು, ಗ್ಯಾರಂಟಿ ಅಂತಾ ಕುಳಿತಿದ್ದಾರೆ. ಜಲಾಶಯದ ವಸ್ತುಸ್ಥಿತಿ ಬಗ್ಗೆ ಗಮನ ಹರಿಸಬೇಕಾಗಿತ್ತು. ಇದನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಜೆಡಿಎಸ್ ನಾಯಕರು ಅಮಿತ್ ಶಾ, ಜೆಪಿ ನಡ್ಡಾ ಜೊತೆಗೆ ಕಾವೇರಿ ವಿಚಾರ ಮಾತಾಡಿದ್ದಾರೆ. ಇವರು ಈವರೆಗೆ ಏನು ಮಾತಾಡಿಲ್ಲ, ಬರಿ ಗ್ಯಾರಂಟಿ ಜಾತ್ರೆಯನ್ನು ಮಾಡುತ್ತಿದ್ದಾರೆ. ದೇವೇಗೌಡರು ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ. ಇವರು ಮಾತ್ರ ರಾಜಕೀಯ ಮಾಡುತ್ತಾ ಕೂತಿದ್ದಾರೆ ಎಂದು ಹೇಳಿದರು.