Mysore
31
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಸ್ಕ್ಯಾನಿಂಗ್‌ ಸೆಂಟರ್‌ ಪರಿಶೀಲನೆಗೆ ಸಮಿತಿ ; ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮ : ಡಿಸಿ ಎಚ್ಚರಿಕೆ

ಮಂಡ್ಯ : ಇತ್ತೀಚೆಗೆ ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ (ಸ್ಕ್ಯಾನಿಂಗ್) ಸೆಂಟರ್‌ಗಳಲ್ಲಿ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದನ್ನು ಲೋಕಾಯುಕ್ತ ಪೋಲೀಸರು ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಲು ಸಮಿತಿ ರಚನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡಯಾಗ್ನಾಸ್ಟಿಕ್ (ಸ್ಕ್ಯಾನಿಂಗ್) ಸೆಂಟರ್‌ಗಳಲ್ಲಿ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಲೋಕಾಯುಕ್ತ ಪೋಲೀಸರು ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸ್ಕ್ಯಾನಿಂಗ್ ಸೆಂಟರ್‌ಗಳ ಬಗ್ಗೆ ದೂರು ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಕ್ಯಾನಿಂಗ್ ಸೆಂಟರಗಳಲ್ಲಿ ನಿಯಮನುಸಾರವಾಗಿ ಸ್ಕ್ಯಾನಿಂಗ್ ವಿವರಗಳನ್ನು ನಮೂದಿಸಿಲ್ಲದರ ಬಗ್ಗೆ ವರದಿಯಾಗಿದ್ದು ಎಲ್ಲಾ ಅಧಿಕಾರಿಗಳೊಂದಿಗೆ ಜಿಲ್ಲಾ ಸಮಿತಿಯನ್ನು ಕರೆದು ಸಭೆಯನ್ನು ನಡೆಸಲಾಗಿದ್ದುಗರ್ಭ ಪೂರ್ವ ಪ್ರಸವ ಪೂರ್ವ ಭ್ರೂಣಲಿಂಗ ನಿಷೇಧ ಕಾಯ್ದೆ ಪಿಸಿಪಿಎನ್‍ಡಿಟಿ ಕಾಯ್ದೆ ಪ್ರಕಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ದಾಖಲು ಮಾಡಿರುವ ಬಗ್ಗೆ ಎಲ್ಲಾ ವಿವರಗಳನ್ನು ಇಲಾಖೆಯಿಂದ ಸಮರ್ಪಕವಾಗಿ ನೀಡಿರುತ್ತಾರೆ. ತಪ್ಪು ಎಸಗಿರುವ ಸ್ಕ್ಯಾನಿಂಗ್ ಸೆಂಟರ್ ಗಳ ವಿರುದ್ಧ ಕೂಡಲೇ ನಿಯಮಾನುಸಾರ ಕ್ರಮವನ್ನು ಜರುಗಿಸುವಂತೆ ಕ್ರಮ ಆಗಬೇಕು ಎಂದರು.

ಅಪ್ರಾಪ್ತ ಬಾಲ ಗರ್ಭಿಣಿಯರನ್ನು ನಿಯಮ ಬಾಹಿರವಾಗಿ ಸ್ಕ್ಯಾನಿಂಗ್ ಮಾಡಿರುವ ಮಾಹಿತಿಯನ್ನು ಸಮರ್ಪಕವಾಗಿ ಸಂಬಂಧಪಟ್ಟಂತಹ ಇಲಾಖೆಗೆ ವರದಿ ಸಲ್ಲಿಸದ್ದು ಅಂತಹ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಸೂಕ್ತ ಪ್ರಕರಣಗಳನ್ನು ದಾಖಲು ಮಾಡುವುದು ಹಾಗೂ ಅವರ ಸ್ಕ್ಯಾನಿಂಗ್ ಸೆಂಟರ್ ನ ಲೈಸೆನ್ಸ್ ಅನ್ನು ರದ್ದುಪಡಿಸಿ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಮುಚ್ಚಲು ಕ್ರಮವಹಿಸುವಂತೆ ಸೂಚಿಸಿದರು.

ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು ಸದರಿ ಸಮಿತಿಯ ಸಂಪೂರ್ಣ ಜವಾಬ್ದಾರಿ ತಾಲೂಕು ಆರೋಗ್ಯ ಅಧಿಕಾರಿಗಳು ತೆಗೆದುಕೊಂಡು ಕಳೆದ ಮುಂದಿನ 10 ದಿವಸದ ಒಳಗಡೆ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು. ಸದರಿ ಜಾಗೃತ ದಳದವರು ಪರಿಶೀಲನೆ ನಡೆಸಿದ ಬಗ್ಗೆ ಕಳೆದ ಆರು ತಿಂಗಳ ಎಫ್.ಆರ್ ಫಾರಂ ಅನ್ನು ಪಡೆದು ಆಡಿಟ್ ಮಾಡಿಸಬೇಕು ಮತ್ತು ನಿಯಮಾನುಸಾರ ನಿಗದಿ ನಮೂನೆಯಲ್ಲಿ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.

18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಸ್ಕ್ಯಾನಿಂಗ್ ಗೆ ಸಂಬಂಧಪಟ್ಟಂತಹ ಸಂದರ್ಭದಲ್ಲಿ ಅಂತಹ ಪ್ರಕರಣಗಳಿದ್ದಲ್ಲಿ ಪೋಕ್ಸೋ ಕಾಯ್ದೆ ಪ್ರಕಾರ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಮಾಡಿ ಕಾನೂನು ಉಲ್ಲಂಘನೆ ಮಾಡಿರುವ ಸ್ಕ್ಯಾನಿಂಗ್ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ ಕೂಡಲೇ ಪ್ರಕರಣಗಳನ್ನು ದಾಖಲು ಮಾಡಲು ಕ್ರಮ ವಹಿಸಬೇಕು ಎಂದರು.

ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಸಂಬಂಧಪಟ್ಟಂತೆ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಹಾಗೂ ಉಪ ವಿಭಾಗ ಅಧಿಕಾರಿಗಳು ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಪ್ರಕಾರ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣೆ ಮಾಡಿ ಮಾಸಿಕ ವರದಿಯನ್ನ ಸಲ್ಲಿಸುವುದು ಹಾಗೂ ಭ್ರೂಣಲಿಂಗ ಪತ್ತೆಯು ಅಪರಾಧ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಹಾಗೂ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್, ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಕಡ್ಡಾಯವಾಗಿ ಮುಂದಿನ 10 ದಿವಸದೊಳಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗದಿತ ನಮೂನೆಯಲ್ಲಿ ವರದಿಯನ್ನು ಸಲ್ಲಿಸಲು ಕ್ರಮವನ್ನ ವಹಿಸಲು ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಆನಂದ.ಎಂ, ಮಂಡ್ಯ ಉಪ ವಿಭಾಗ ಅಧಿಕಾರಿ ಶಿವಮೂರ್ತಿ, ಪಾಂಡವಪುರ ಉಪ ವಿಭಾಗ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬೆಟ್ಟಸ್ವಾಮಿ, ಕುಷ್ಠ ರೋಗ ನಿರ್ಮೂಲನ ಅಧಿಕಾರಿ ಸೋಮಶೇಖರ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಕುಮಾರ್, ಮಲೇರಿಯಾ ನಿಯಂತ್ರಣ ಅಧಿಕಾರಿ ಕಾಂತರಾಜು, ಡಾ. ಕೆ.ಪಿ. ಅಶ್ವಥ್ ಉಪಸ್ಥಿತರಿದ್ದರು.

Tags:
error: Content is protected !!