ಮಂಡ್ಯ : ಯೋಜನೆ ಅನುಮೋದನೆ ನೀಡಲು ಲಂಚ ಸ್ವೀಕರಿಸುತ್ತಿದ್ದ ನಗರ ಯೋಜನಾ ಪ್ರಾಧಿಕಾರದ ಮೂವರು ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ನಗರ ಯೋಜನಾ ಪ್ರಾಧಿಕಾರದ ಅಸಿಸ್ಟೆಂಟ್ ಡೈರೆಕ್ಟರ್ ಅನನ್ಯ ಮನೋಹರ್, ಟೌನ್ ಪ್ಲಾನರ್ ಸೌಮ್ಯ, ಹೊರ ಗುತ್ತಿಗೆ ನೌಕರ ಹರೀಶ್ ಎಂಬವರೇ ಲೋಕಾ ಬಲೆಗೆ ಬಿದ್ದವರಾಗಿದ್ದಾರೆ. ಮದ್ದೂರು ತಾಲ್ಲೂಕು ಚಂದೂಪುರ ಗ್ರಾಮದ ಪುನೀತ್ ಅವರು ಕಟ್ಟಡ ಕಟ್ಟಲು ಯೋಜನಾ ಅನುಮೋದನೆ ಪತ್ರ ಪಡೆಯುವಂತೆ ಅರ್ಜಿ ಸಲ್ಲಿಸಿದ್ದರು.
ಯೋಜನಾ ಅನುಮೋದನೆ ಪತ್ರ ಪಡೆಯಲು ಅಸಿಸ್ಟೆಂಟ್ ಡೈರೆಕ್ಟರ್ ಅನನ್ಯ ಮನೋಹರ್, ಟೌನ್ ಪ್ಲಾನರ್ ಸೌಮ್ಯ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, 8 ತಿಂಗಳಿನಿಂದ ಯೋಜನಾ ಅನುಮೋದನೆ ಪತ್ರ ನೀಡಲು ಸತಾಯಿಸುತ್ತಿದ್ದರು. ಅಂತಿಮವಾಗಿ 30 ಸಾವಿರ ರೂ. ನೀಡುವಂತೆ ಪುನೀತ್ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಪುನೀತ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಮಂಗಳವಾರ ನಗರ ಯೋಜನಾ ಪ್ರಾಧಿಕಾರಕ್ಕೆ ಪುನೀತ್ ಅವರು ತೆರಳಿ ಅಧಿಕಾರಿಗಳಿಗೆ ಮೊದಲ ಕಂತಾಗಿ ೧೫ ಸಾವಿರ ರೂ. ಲಂಚ ನೀಡುವಾಗ ಲೋಕಾಯುಕ್ತ ಸಿಪಿಐ ಬ್ಯಾಟರಾಯಿಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.





