ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಸಮೀಪ ʻಕಾವೇರಿ ಆರತಿʼ ಕಾರ್ಯಕ್ರಮ ಆಯೋಜಿಸಲು ನಡೆಸುತ್ತಿದ್ದ ಪೂರ್ವ ಸಿದ್ದತಾ ಕಾಮಗಾರಿಯನ್ನು ಮಂಗಳವಾರ ಸ್ಥಗಿತಗೊಳಿಸಲಾಗಿದೆ.
ಕಾವೇರಿ ಆರತಿಯ ವೇದಿಕೆ ನಿರ್ಮಿಸಲು ಕಳೆದ ಮೂರು ದಿನಗಳಿಂದ ಸ್ಥಳ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕೆ ರೈತರು ಪ್ರಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ನಾಳೆ ಕೆಆರ್‌ಎಸ್ ಡ್ಯಾಂ ಬಳಿ ರೈತರು ಹಾಗೂ ಪ್ರಗತಿಪರ ಸಂಘಟನೆಗಳು ಕಾವೇರಿ ಆರತಿ ವಿರೋಧಿಸಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೇ, ಸಿದ್ಧತಾ ಕಾರ್ಯಕ್ರಮಗಳ ಕಾಮಗಾರಿಗಳನ್ನು ಸದ್ಯಕ್ಕೆ ನಿಲ್ಲಿಸುವಂತೆ ಮೇಲಾಧಿಕಾರಿಗಳು ಮೌಖಿಕವಾಗಿ ಸೂಚಿಸಿರುವುದಾಗಿ ಕಾವೇರಿ ನಿರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ತಿಳಿಸಿದ್ದಾರೆ.