ರೈತ ಹೋರಾಟಗಾರರಿಗೆ ಗೆಲುವು ; ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ
ಮಂಡ್ಯ : ಹಳೇ ಮೈಸೂರು ಪ್ರಾಂತ್ಯದ ರೈತರು ಹಾಗೂ ಜನರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ಬಳಿ ಸರ್ಕಾರ ಸ್ಥಾಪಿಸಲು ಹೊರಟಿದ್ದ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಕೆ.ಆರ್.ಎಸ್. ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದರಿಂದ ಜಲಾಶಯಕ್ಕೆ ಅಪಾಯ ಬರಬಹುದು ಎಂಬ ಆತಂಕದಿಂದ ರೈತರು, ಹೋರಾಟಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಪರಿಸರವಾದಿಗಳು ವಿವಿಧ ಚಳವಳಿಗಾರರ ವಿರೋಧದ ನಡುವೆ ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ನಡೆಸಲು ಕಾಮಗಾರಿ ಕೈಗೊಂಡಿತ್ತು.
ರಾಜ್ಯ ಸರ್ಕಾರದ ಇಂತಹ ನಿರ್ಧಾರವನ್ನು ಪ್ರಶ್ನಿಸಿ ರೈತ ಹೋರಾಟಗಾರ ಕೆ.ಬೋರಯ್ಯ ಅವರು ಅಮ್ಯೂಸ್‌ಮೆಂಟ್ ಪಾರ್ಕ್ ವಿರೋಧಿಸಿ ರಾಜ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ಅರ್ಜಿಯನ್ನು ಕೈಗೆತ್ತಿಕೊಂಡ ರಾಜ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಕಾಮೇಶ್ವರರಾವ್ ಹಾಗೂ ಸಿ.ಎಂ.ಜೋಶಿ ಅವರು ಎರಡು ದಿನಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿ ಕನ್ನಂಬಾಡಿ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ತಡೆಯಾಜ್ಞೆ ನೀಡಿದೆ.
ಕಾವೇರಿ ಆರತಿ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮೇಲ್ಕಂಡ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು ಅರ್ಜಿದಾರರ ಮನವಿಯ ಮೇರೆಗೆ ಕಾವೇರಿ ಆರತಿ ಯೋಜನೆಗೂ ತಡೆಯಾಜ್ಞೆ ನೀಡಿದೆ. ಎರಡೂ ಪ್ರಕರಣಗಳಿಗೆ ಸಂಬಂಧಸಿದಂತೆ ವಕೀಲ ಎಂ.ಶಿವಪ್ರಕಾಶ್ ಅವರು ವಾದ ಮಂಡಿಸಿದ್ದರು.





