Mysore
21
overcast clouds
Light
Dark

ಕೆರಗೋಡು ಬಳಿ ಬೈಕ್‌ಗೆ ಕಾರು ಡಿಕ್ಕಿ: ಪತ್ನಿ, ಪತಿ ಸಾವು

ಮಂಡ್ಯ: ತಾಲ್ಲೂಕಿನ ಕೆರಗೋಡು-ಮರಿಲಿಂಗನದೊಡ್ಡಿ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಸ್ಥಳದಲ್ಲೇ  ಮಹಿಳೆಯು ಮೃತಪಟ್ಟಿದ್ದು,  ಪತಿಯೂ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕೆರಗೋಡು ಸಮೀಪದ ಚಿಕ್ಕಬಾಣಸವಾಡಿಯ ಸಿ.ಮಂಜು(46) ಮತ್ತು ಅವರ ಪತ್ನಿ ಎಚ್.ಎಸ್.ಸುನೀಲ(40) ಮೃತ ದಂಪತಿ. ಇಬ್ಬರೂ ಜೂ.3 ರ ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆ ತಮ್ಮ ಹೀರೋಹೊಂಡ ಬೈಕ್‌ನಲ್ಲಿ ಕೆರಗೋಡು ಗ್ರಾಮದ ದೇವಾಲಯಕ್ಕೆ ಹೋಗುತ್ತಿದ್ದ ವೇಳೆ ಮರಿಲಿಂಗನದೊಡ್ಡಿಯ ಬಳಿ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಂಜು ಅವರ ಪತ್ನಿ ಸುನೀಲ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರ ಗಾಯಗೊಂಡಿದ್ದ ಮಂಜು ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಿ.ಮಂಜು ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ಸಿ.ಮಂಜು ಅವರ ಅಂಗಾಂಗವನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮೃತರಿಗೆ ಓರ್ವ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಚಿಕ್ಕಬಾಣಸವಾಡಿಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದು, ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.