ಮಂಡ್ಯ: ಬೂದನೂರು ಗ್ರಾಮ ಪಂಚಾಯತಿ ಕಸ ವಿಲೇವಾರಿಗೆ ಖರೀದಿಸಿದ ಆಟೋ ಬಳಕೆ ಮಾಡದೇ 4 ವರ್ಷಗಳಿಂದ ತುಕ್ಕು ಹಿಡಿಯುತ್ತಿರುವುದನ್ನು ವಿರೋಧಿಸಿ ಬೂದನೂರು ನಾಗರೀಕರು ಆಟೋ ತೊಳೆದು, ಪೂಜೆ ಸಲ್ಲಿಸಿ ವಿನೂತನ ಪ್ರತಿಭಟನೆ ಮಾಡಿದರು.
ಗ್ರಾಮ ಪಂಚಾಯತಿ ಕಚೇರಿ ಬಳಿ ಜಮಾಯಿಸಿದ ಮಹಿಳೆಯರು ಆಟೋ ತೊಳೆದು, ಅರಿಸಿನ ಕುಂಕುಮ ಹಚ್ಚಿ ಹೂ ಮುಡಿಸಿ ಗಂಧದ ಕಡ್ಡಿ, ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಐದಾರು ಲಕ್ಷ ರೂ. ಕೊಟ್ಟು 2021ರಲ್ಲಿ ಖರೀದಿಸಿದ ಆಟೋವನ್ನು ಗ್ರಾಮಸಭೆ ಡಂಗೂರ, ಬೀದಿ ದೀಪ ಅಳವಡಿಸಲು ಮುಂತಾಗಿ ಖಾಸಗಿ ಬಳಕೆ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
4 ವರ್ಷಗಳಲ್ಲಿ 2200 ಕಿ.ಮೀ ಬಳಕೆ ತೋರುತ್ತಿರುವ ಆಟೋ ಮೀಟರ್ ಗೆ ವಿಮೆ, ಸರ್ವೀಸ್ ಮುಂತಾಗಿ ಹೆಚ್ಚುವರಿ ವೆಚ್ಚ ಭರಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಿಂದಿನ ಆಡಳಿತ ಮಂಡಳಿ ಘನತ್ಯಾಜ್ಯಕ್ಕೆ ಭೂಮಿ ನಿಗದಿ, ಪ್ರತಿ ಮನೆಗೆ ಕಸ ಸಂಗ್ರಹಕ್ಕೆ ಬಕೆಟ್ ನೀಡಿದೆ. ಅಲ್ಲದೆ ಸಾಮಾಗ್ರಿ ಖರೀದಿಗೆ ಬ್ಯಾಗ್ ವಿತರಿಸಿದೆ. ಪ್ರಸ್ತುತ ಆಡಳಿತ ಮಂಡಳಿ ಕಸ ವಿಲೇವಾರಿಗೆ ಅಗತ್ಯ ವೈಜ್ಞಾನಿಕ ಕ್ರಮ ಅನುಸರಿಸುತ್ತಿಲ್ಲ ಎಂದು ದೂರಿದರು.
ಕೂಡಲೇ ಕಸ ವಿಲೇವಾರಿಗೆ ಕ್ರಮ ವಹಿಸದಿದ್ದಲ್ಲಿ ಗ್ರಾಮ ಪಂಚಾಯತಿ ಕಚೇರಿ ಮುಂದೆ ಕಸ ಸುರಿಯುವ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಗ್ರಾಪಂ ಮಾಜಿ ಸದಸ್ಯರಾದ ಕುಳ್ಳ, ಸತೀಶ್ ಬೂಸ, ಸವಿತಾ, ಸುಧಾ, ಎಲ್ಲಮ್ಮ ಮೊದಲಾದವರಿದ್ದರು.