ಬೆಂಗಳೂರು : ಹೇಮಾವತಿ ಯೋಜನಾ ವ್ಯಾಪ್ತಿಯಲ್ಲಿ ನಾಗಮಂಗಲ ಶಾಖಾ ನಾಲೆಯು ಸರಪಳಿ 0.00 ಕಿ.ಮೀ ಇಂದ 78.46 ಕಿ.ಮೀ ವರೆಗೆ 560 ಕೋಟಿ ರೂಪಾಯಿ ಅಂದಾಜು ಮೊತ್ತದ ಮರುವಿನ್ಯಾಸ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ನಾಗಮಂಗಲ ಶಾಖಾ ನಾಲೆಯು ಮೂಲ ಯೋಜನಾ ವರದಿಯಂತೆ 78.46 ಕಿ.ಮೀ ಉದ್ದವಿದ್ದು, ಈ ನಾಲೆಯನ್ನು 1994ರಲ್ಲಿ ಪ್ರಾರಂಭಿಸಿ 2004ರಲ್ಲಿ ಪೂರ್ಣಗೊಳಿಸಿ ನಾಲೆಯಲ್ಲಿ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ 717 ಕ್ಯೂಸೆಕ್ ಸಾಮರ್ಥ್ಯವಿದ್ದು 1,21,197 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಒದಗಿಸಲಾಗುತ್ತದೆ. ಇದರ ಜೊತೆಗೆ 53 ಕ್ಯೂಸೆಕ್ಸ್ ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೆ ಒದಗಿಸಲಾಗಿದ್ದು, ಒಟ್ಟಾರೆ 770 ಕ್ಯೂಸೆಕ್ಸ್ ಗೆ ಸದರಿ ನಾಲೆಯನ್ನು ರೀಮಾಡಲಿಂಗ್ ಮಾಡಲು ಉದ್ದೇಶಿಸಲಾಗಿದೆ.
ಹಾಲಿ ನಾಲೆ ತಿಪಟೂರು ತಾಲ್ಲೂಕಿನಲ್ಲಿ 20.39 ಕಿ.ಮೀ. ಇದ್ದು, 4177 ಎಕರೆ ಅಚ್ಚುಕಟ್ಟು ಪ್ರದೇಶ, ತುರುವೇಕೆರೆ ತಾಲ್ಲೂಕಿನಲ್ಲಿ 25.01 ಕಿ.ಮೀ ಇದ್ದು, 60274 ಎಕರೆ ಅಚ್ಚುಕಟ್ಟು ಪ್ರದೇಶ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ 30.56 ಕಿ.ಮೀ ಇದ್ದು, 56746 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಾಲೆಯು 2.50 ಕಿ.ಮೀ. ಉದ್ದವಿದ್ದು, ಒಟ್ಟಾರೆ 78.46 ಕಿ.ಮೀ. ಇದ್ದು, 1,21,197 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ.
ಈ ನಾಲೆಯನ್ನು ಸುಮಾರು 20 ರಿಂದ 30 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ನೀರಿನ ಸತತ ಹರಿಯುವಿಕೆಯಿಂದ ನಾಲೆಯ ದುರ್ಬಲ ಭಾಗಗಳಲ್ಲಿ ಕೊರಕಲು ಉಂಟಾಗಿ, ನಾಲೆಯ ಹಲವಾರು ಭಾಗಗಳಲ್ಲಿ ಲೈನಿಂಗ್ ಹಾಳಾಗಿರುತ್ತದೆ. ಡೀಪ್ ಕಟ್ ಭಾಗಗಳಲ್ಲಿ (RCC retaining wall) ಮತ್ತು ಕಟ್ & ಕವರ್ ಡಕ್ ಗಳನ್ನು (more than 12m depth) ಪರಿಷ್ಕೃತ ಸಾಮರ್ಥ್ಯಕ್ಕೆ ವಿನ್ಯಾಸಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ.
ಪ್ರಸ್ತುತ ಸುಸ್ಥಿತಿಯಲ್ಲಿರುವ ಸುಮಾರು 4.20 ಕಿ.ಮೀ ಉದ್ದದ ಲೈನಿಂಗ್ ಅನ್ನು ಉಳಿಸಿಕೊಂಡು, ಹಾಳಾಗಿರುವ ಉಳಿದ ಭಾಗಗಳನ್ನು ತೆಗೆದು ಹೊಸದಾಗಿ ಲೈನಿಂಗ್ ನಿರ್ಮಿಸುವುದು. ನಾಲೆಯ ಏರಿಯ ಹಲವಾರು ಸ್ಥಳಗಳಲ್ಲಿ ಹೊರ ಇಳಿಜಾರಿನ ಭಾಗಗಳು ಕುಸಿದಿದ್ದು, ಇವುಗಳ ರಕ್ಷಣೆ ಮಾಡುವುದು ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಇತರೆ ಅನುಕೂಲಗಳಿಗಾಗಿ ಸೋಪಾನ, ಕ್ಯಾಟಲ್ ರ್ಯಾಪ್ ಹಾಗೂ ಕೆಲವು ಸೇತುವೆಗಳನ್ನು ನಿರ್ಮಿಸುವುದು.
ನಾಲೆಯ ವಾರ್ಷಿಕ ನಿರ್ವಹಣೆಗೆ ಅನುವಾಗುವಂತೆ ಡೀಪ್ ಕಟ್ ಭಾಗಗಳಲ್ಲಿ ರ್ರ್ಯಾಂಪ್ ನಿರ್ಮಿಸುವುದು. ನಾಲೆಯ ಮುಖ್ಯ ಭಾಗಗಳಲ್ಲಿ ನೀರಿನ ಸಾಮರ್ಥ್ಯವನ್ನು ಅಳೆಯಲು ಗೇಜಿಂಗ್ ವ್ಯವಸ್ಥೆ (SCADA) ಅಳವಡಿಸುವುದು ಹಾಗೂ ಇದಕ್ಕಾಗಿ ಭದ್ರತಾ ಕೊಠಡಿಗಳನ್ನು ನಿರ್ಮಿಸುವುದು.
ಈ ಹಿಂದೆ ನಿರ್ಮಿಸಲಾಗಿರುವ ಒಟ್ಟು 432 ಸಂಖ್ಯೆಯ ಅಡ್ಡ ಮೋರಿ/ಕಟ್ಟಡಗಳ ಪೈಕಿ ಸುಸ್ಥಿತಿಯಲ್ಲಿರುವ 147 ಅಡ್ಡಮೋರಿಗಳನ್ನು ಹೊರತುಪಡಿಸಿ, ಇನ್ನು ಉಳಿದ 285 ಸಂಖ್ಯೆ ಅಡ್ಡ ಮೋರಿ/ಕಟ್ಟಡಗಳ ಪುನರ್ ನಿರ್ಮಾಣ/ದುರಸ್ತಿ ಮಾಡಲು ಹಾಗೂ 79 ಸಂಖ್ಯೆ ಹೊಸ ಅಡ್ಡ/ಮೋರಿ/ಕಟ್ಟಡಗಳನ್ನು (ಇವುಗಳಲ್ಲಿ 3 ಸಂಖ್ಯೆಯ ಸೇತುವೆ, 23 ಸಂಖ್ಯೆ ಕವರ್ ಡಕ್ಟ್ಗಳು, 42 ಸಂಖ್ಯೆಯ ಗ್ರಾವಿಟಿ ವಾಲ್, 8 ಡೀಪ್ ಕಟ್ ರ್ಯಾಂಪ್ಗಳು, 1 ಸಂಖ್ಯೆ ಇನ್ ಲೈಟ್, 1 ಸಂಖ್ಯೆ ಕ್ಯಾಟಲ್ ರ್ಯಾಂಪ್, 1 ಸಂಖ್ಯೆ ರಿವೀಲಿಂಗ್ ವಿಯರ್) ನಿರ್ಮಿಸಲು ಅನುವು ಮಾಡಲಾಗಿದೆ.
ಈ ಯೋಜನೆ ಅನುಷ್ಟಾನದಿಂದ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳ ವಿವಿಧ ಭಾಗಗಳ ರೈತರಿಗೆ ಹಾಗೂ ಜನ-ಜಾನುವಾರುಗಳಿಗೆ ಅನುಕೂಲವಾಗಿದೆ.
ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನ ಹಾಗೂ ಕಾಳಜಿಯಿಂದ ಈ ಯೋಜನೆಗೆ ಅನುಮೋದನೆ ದೊರಕಿದ್ದು ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹದ್ಯೋಗ ಮಿತ್ರರಿಗೆ ಕೃಷಿ ಸಚಿವರು ಧನ್ಯವಾದ ಸಮರ್ಪಿಸಿದ್ದಾರೆ.
ಇದೊಂದು ಗ್ಯಾರಂಟಿ ಸರ್ಕಾರ ,ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದೆಲ್ಲಾ ಆರೋಪಗಳಿಗೆ ಇದು ಉತ್ತರವಾಗಿದೆ. ರಾಜ್ಯ ಸರ್ಕಾರ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೂ ದೊಡ್ಡಮಟ್ಟದಲ್ಲಿ ಅನುದಾನ ಮೀಸಲಿರಿಸಿ ಅನುಮೋದನೆ ನೀಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಸಚಿವ ಎನ್ .ಚಲುವರಾಯಸ್ವಾಮಿ ತಿಳಿಸಿದ್ದಾರೆ.





