ಮಂಡ್ಯ: ವಂಚಕಿ ಐಶ್ವರ್ಯ ಗೌಡ ವಿರುದ್ಧ ಮೇಲಿಂದ ಮೇಲೆ ಎಫ್‌ಐಆರ್ ದಾಖಲಾಗುತ್ತಲೇ ಇದ್ದು, ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ವಂಚಕಿ ಐಶ್ವರ್ಯ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸಿ ಭಾಗ್ಯಮ್ಮ ಎಂಬುವವರು ತಮಗೂ ವಂಚನೆ ಮಾಡಿರುವುದಾಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಅನ್ವಯ ವಂಚಕಿ ಐಶ್ವರ್ಯ ಗೌಡ ವಿರುದ್ಧ ಕೇಸ್ ದಾಖಲಾಗಿದ್ದು, ಪತಿ ಹರೀಶ್, ಸಹೋದರ ಮಂಜುನಾಥ್ ಹಾಗೂ ಯಶವಂತ್ ಎಂಬುವವರ ಮೇಲೂ ಪ್ರಕರಣ ದಾಖಲಾಗಿದೆ.
33 ಲಕ್ಷ ನಗದು ಹಾಗೂ ಚಿನ್ನಾಭರಣ ಪಡೆದು ವಂಚನೆ ಮಾಡಿರುವುದಾಗಿ ಕೇಸ್ ದಾಖಲಾಗಿದ್ದು, ಬಗೆದಷ್ಟು ಐಶ್ವರ್ಯ ಗೌಡ ವಂಚನೆ ಬಯಲಾಗುತ್ತಿದೆ.
ಕಳೆದ 2017ರ ಜನವರಿಯಿಂದ ಜೂನ್ ತಿಂಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯವಹಾರ ಮಾಡುವುದಾಗಿ ಐಶ್ವರ್ಯ ನಂಬಿಸಿದ್ದಾಳೆ. ಒಟ್ಟು 33 ಲಕ್ಷ ರೂ ನಗದು ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನು ಪಡೆದುಕೊಂಡಿದ್ದಾಳೆ. ಇದು ತನ್ನ ಮೃತ ಗಂಡನ ನಿವೃತ್ತಿಯ ಹಣ ಎಂದು ಭಾಗ್ಯಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.