ಆಹಾರ ಪದಾರ್ಥ, ಬಟ್ಟೆ, ಪಾತ್ರೆ, ಕಾಗದ ಪತ್ರ ನಾಶ
ಹಲಗೂರು : ಇಲ್ಲಿಗೆ ಸಮೀಪದ ಬುಯ್ಯನದೊಡ್ಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಹಚ್ಚಿದ ಪರಿಣಾಮ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿದ್ದು, ಅಲ್ಲಿ ವಾಸವಿದ್ದ ಕುಟುಂಬ ಅತಂತ್ರವಾಗಿದೆ.
ಗುರುವಮ್ಮ ಎಂಬ ಮಹಿಳೆ ಗರ್ಭಿಣಿಯಾಗಿದ್ದು, ಹೆರಿಗೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಪತಿ ಮರೀಗೌಡ ಮತ್ತು ಅಳಿಯ ಗುಡಿಸಲಲ್ಲಿ ಮಲಗಿದ್ದರು. ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಗುಡಿಸಲಿನ ಒಂದು ಮೂಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮರೀಗೌಡ ಹಾಗೂ ಅಳಿಯ ಹೊರಗೆ ಓಡಿಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಕ್ಕಪಕ್ಕದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲೇ ಇಡೀ ಗುಡಿಸಲನ್ನು ಆವರಿಸಿದ ಪರಿಣಾಮ, ಗುಡಿಸಲಿನಲ್ಲಿದ್ದ ಆಹಾರ ಪದಾರ್ಥಗಳು, ಬಟ್ಟೆಗಳು, ಪಾತ್ರೆಗಳು, ಕಾಗದ ಪತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ನಮ್ಮ ಮನೆಗೆ ಬೆಂಕಿ ಹಚ್ಚಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವೃದ್ಧ ಮರೀಗೌಡ ಪೊಲೀಸರಲ್ಲಿ ದೂರು ನೀಡಿದರು.
ಕಡುಬಡ ಕುಟುಂಬ ವಾಸವಿದ್ದ ಗುಡಿಸಲು ಸುಟ್ಟು ಹೋಗಿರುವುದರಿಂದ ದಿಕ್ಕುತೋಚದಂತಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಹಿರಿಯ ಮುಖಂಡ ವೆಂಕಟೇಶ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





