ಮಂಡ್ಯ: ಗ್ಯಾರಂಟಿ ಯೋಜನೆಯಿಂದ ಪ್ರತಿ ತಾಲ್ಲೂಕಿಗೆ ಒಂದು ವರ್ಷದಲ್ಲಿ ಸುಮಾರು 220 ಕೋಟಿ ರೂ. ನೀಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಅವರು ಇಂದು(ಜ.20) ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಟುವಂತಿಲ್ಲ, ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದರು.
ನಮ್ಮ ರಾಜ್ಯದಲ್ಲಿ ಸಾರ್ವಜನಿಕರಿಗೆ ನೀಡುವ ಕಾರ್ಯಕ್ರಮಗಳಿಗೆ ಸಂಗ್ರಹಿಸುವ ಫಲಾನುಭವಿಗಳ ವಿವರಗಳ ಬಗ್ಗೆ ಬೇರೆ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿ, ವಿವರ ಸಂಗ್ರಹಿಸಲು ರೂಪಿಸಿರುವ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಮನವಿ ಸಲ್ಲಿಸಿರುವುದು ಹರ್ಷದಾಯಕವಾಗಿದೆ ಎಂದರು.
ಕೊಪ್ಪ ಹೋಬಳಿಯಲ್ಲಿ ಇದು ಎರಡನೇ ಬಾರಿಗೆ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸ್ವೀಕರಿಸುವ ಕುಂದು ಕೊರತೆ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.
ಕೊಪ್ಪದಲ್ಲಿ ಬೇಡಿಕೆ ಇರುವ ಪೊಲೀಸ್ ಠಾಣೆ ನಿರ್ಮಾಣ, ನಾಡ ಕಚೇರಿ ಹಾಗೂ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದಲ್ಲದೇ ಪಂಚಾಯಿತಿ ಕಚೇರಿ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಸುಮಾರು 1 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದರು.
ಸಹಕಾರ ಸಂಘದ ಮೂಲಕ ರೂ 1 ಕೋಟಿ ಸಾಲ ಕೊಪ್ಪ ಹಾಗೂ ಸುತ್ತಮುತ್ತಲಿನ 16 ಹಳ್ಳಿಗಳ ಕೃಷಿ ಪತ್ತಿನ ಸಹಕಾರ ಸಂಘ ಹಲವಾರು ಕಾರಣಗಳಿಂದ ಕೆಲಸ ಸ್ಥಗಿತಗೊಳಿಸಿತ್ತು. ಇದನ್ನು ಸರಿಪಡಿಸಿ ರೈತರು ಹಾಗೂ ಮಹಿಳೆಯರಿಗೆ ಆರ್ಥಿಕವಾಗಿ ಸದೃಢರಾಗಲು ಬಡ್ಡಿ ರಹಿತವಾಗಿ 1 ಕೋಟಿ ರೂ ವರೆಗೆ ಸಾಲ ನೀಡಲಾಗಿದೆ. ಇದಕ್ಕೆ ನಬಾಡ್೯ ವಿಧಿಸುವ ಬಡ್ಡಿಯನ್ನು ಸರ್ಕಾರ ಭರಿಸುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳ ಜೊತೆಗೆ ಹೈನುಗಾರಿಕೆ ಕೃಷಿ ಸಂಬಂಧಿಸಿದ ಇಲಾಖೆಗಳ ಮೂಲಕ ಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರು 2000 ಫಲಾನುಭವಿಗಳಿಗೆ 1.96 ಕೋಟಿ ರೂ ಸಹಾಯಧನ ನೀಡಲಾಗಿದೆ ಎಂದರು.
ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ ಕಳೆದ ಒಂದುವರೆ ತಿಂಗಳಿನಿಂದ ಕೊಪ್ಪ ವ್ಯಾಪ್ತಿಯಲ್ಲಿ 1275 ಅರ್ಜಿ ಸ್ವೀಕರಿಸಿ ಸುಮಾರು 443 ಪೌತಿ ಖಾತೆ ಮಾಡಿಕೊಡಲಾಗಿದೆ. ಪೌತಿ ಖಾತೆ ಮಾಡಿಸಿಕೊಳ್ಳಲು ರೈತರು ಸಹ ಆಸಕ್ತಿ ತೋರಿಸಿ ಮುಂದೆ ಬರಬೇಕು. ದಾಖಲೆ, ಆರ್.ಟಿ.ಸಿ ಗಳು ಸರಿಯಿದ್ದರೆ ಮಾತ್ರ ಬ್ಯಾಂಕ್ ಅಥವಾ ಸೊಸೈಟಿಗಳಿಂದ ಸಾಲ ಪಡೆಯಲು ಸಾಧ್ಯ ಎಂದು ಹೇಳಿದರು.
ರೈತರ ಭೂಮಿ ಹಾಗೂ ಇನ್ನಿತರೆ ದಾಖಲೆಗಳನ್ನು ಕಂದಾಯ ಇಲಾಖೆ ಡಿಜಿಟಲ್ ಮಾಡುವ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 36 ಲಕ್ಷ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಜನಪರ ಕೆಲಸಗಳು ನಡೆಯುತ್ತಿದ್ದು, ಸುಮಾರು 67 ಲಕ್ಷ ಪೌತಿ ಖಾತೆ, ಹಲವಾರು ವರ್ಷಗಳಿಂದ ಬಾಕಿ ಇದ್ದ ಕೋಟ್೯ ಪ್ರಕರಣಗಳನ್ನು ಒಂದು ವರ್ಷದಲ್ಲಿ 16000 ವಿಲೇವಾರಿ ಮಾಡಲಾಗಿದೆ. 18 ಲಕ್ಷ ಆರ್.ಟಿ.ಸಿ ಗಳಿಗೆ ಆಧಾರ್ ಜೋಡಣೆ ಕೆಲಸ ಮಾಡಲಾಗಿದೆ ಎಂದು ನುಡಿದರು.
ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಜನತಾ ದರ್ಶನ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಕೊಪ್ಪದಲ್ಲಿ ಆಯೋಜಿಸಲಾಗಿದ್ದು, ಈ ಹಿಂದೆ ಸ್ವೀಕೃತವಾರ ಕುಂದು ಕೊರತೆ ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ ಎಂದರು.
ಕಂದಾಯ ಇಲಾಖೆ ಚುರುಕಾಗಿ ಕೆಲಸ ನಿರ್ವಹಿಸುತ್ತಿದ್ದು, ಸ್ವಯಂ ಪ್ರೇರಿತವಾಗಿ ಪೌತಿ ಖಾತೆ ಆಂದೋಲನ, ಪೋಡಿ ದುರಸ್ತಿ, ಆಧಾರ ಸೀಡಿಂಗ್ ಕೆಲಸಗಳನ್ನು ಮನೆ ಮನೆಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿಕೊಂಡು ಮಾಡಿಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್,ಮಂಡ್ಯ ಉಪವಿಭಾಗಾಧಿಕಾರಿ ಶಿವ ಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.