Mysore
13
scattered clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಚಿರತೆ ದಾಳಿಗೆ 12 ಮೇಕೆ ಬಲಿ : ಮೇಕೆಗಳ ಮೃತದೇಹ ಹೆದ್ದಾರಿಯಲ್ಲಿಟ್ಟು ಗ್ರಾಮಸ್ಥರ ಪ್ರತಿಭಟನೆ

leopard attack

ಪಾಂಡವಪುರ : ಮೇಕೆ ಮತ್ತು ಕುರಿಗಳ ಮೇಲೆ ಚಿರತೆ ದಾಳಿ ನಡೆಸಿ, 12 ಮೇಕೆಗಳನ್ನು ಕೊಂದಿದ್ದರೂ, ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದನ್ನು ಖಂಡಿಸಿ ಟಿ.ಎಸ್.ಛತ್ರ ಗ್ರಾಮಸ್ಥರು ಸಾವನ್ನಪ್ಪಿದ ಮೇಕೆಗಳನ್ನು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದರು.

ಟಿ.ಎಸ್.ಛತ್ರ ಗ್ರಾಮದ ರೈತ ಮಾಯಿಗೌಡ ಎಂಬವರ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಆಡುಗಳ ಮೇಲೆ ಮಂಗಳವಾರ ಮಂಜಾನೆ ಚಿರತೆ ದಾಳಿ ನಡೆಸಿ 12 ಮೇಕೆಗಳನ್ನು ಕೊಂದು ಪರಾರಿಯಾಗಿದೆ. ಮೇಕೆಗಳ ಮಾಲೀಕ ಮುಂಜಾನೆ ಜಮೀನಿನ ಬಳಿ ತೆರಳಿ ಮೇಕೆಗಳನ್ನು ಮೇಯಿಸಲು ದನದ ಕೊಟ್ಟಿಗೆ ತೆರೆದಾಗ ಮೇಕೆಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಮಧ್ಯಾಹ್ನವಾದರೂ ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮೃತಪಟ್ಟ ಮೇಕೆಗಳನ್ನು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಯ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಟಿ.ಎಸ್.ಛತ್ರ ಪಕ್ಕದ ಇಂಗಲಕುಪ್ಪೆ ಗ್ರಾಮದಲ್ಲಿ ಕೊಟ್ಟಿಗೆಗೆ ಚಿರತೆ ನುಗ್ಗಿ ಮೂರು ಮೇಕೆಗಳನ್ನು ಕೊಂದಿತ್ತು. ಆದರೆ, ಅರಣ್ಯಾಧಿಕಾರಿಗಳು ಚಿರತೆಯ ಸೆರೆಗೆ ಯಾವುದೇ ಕ್ರಮ ಜರುಗಿಸಲಿಲ್ಲ. ಘಟನೆ ನಡೆದ ಮೂರೇ ದಿನದಲ್ಲಿ ಈಗ ಪಕ್ಕದ ಗ್ರಾಮದಲ್ಲಿಯೂ ಘಟನೆ ನಡೆದಿದೆ. ಈ ಘಟನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಘಟನೆಯಿಂದಾಗಿ ರೈತ ಮಾಯಿಗೌಡರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಹಾಗಾಗಿ ಸಂಬಂಧಿಸಿದ ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತ ಮಾಯಿಗೌಡ ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ವಾಹನ ಸವಾರರು ಪರದಾಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ, ಪರಿಹಾರ ದೊರಕಿಸಿಕೊಡುವುದರ ಜತೆಗೆ ಚಿರತೆ ಸೆರೆಗೆ ಬೋನ್ ಇಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಟಿ.ಎಸ್.ಛತ್ರ, ಇಂಗಲಕುಪ್ಪೆ , ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!