ಮಂಡ್ಯ : ಜಿಲ್ಲಾ ಕೇಂದ್ರ ಮಂಡ್ಯ ನಗರಸಭೆ ವ್ಯಾಪ್ತಿಯ ರಸ್ತೆಗಳ ಉನ್ನತೀಕರಣ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ೮೦ ಕೋಟಿ ರೂ. ಮಂಜೂರಾಗಿದ್ದು, ಈ ಪೈಕಿ ೫೨ ಕೋಟಿ ರೂ.ಗಳನ್ನು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ ಎಂದು ಶಾಸಕ ಪಿ.ರವಿಕುಮಾರ್‌ಗೌಡ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿ, ಕ್ರೀಡಾಂಗಣ ನಿರ್ಮಾಣ, ಮಳೆ ರಕ್ಷಣಾ ಗೋಡೆ, ಕೆಂಪೇಗೌಡ ಪ್ರತಿಮೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುಮತಿ ದೊರೆತಿದೆ ಎಂದು ಹೇಳಿದರು.
ನಗರದ ಬನ್ನೂರು ರಸ್ತೆ ಅಭಿವೃದ್ಧಿಗೆ ೬.೪೦ ಕೋಟಿ ರೂ. ಡಲ್ಛ್ ವತಿಯಿಂದ ಯೋಜನೆ ಮಂಜೂರಾಗಿದ್ದು, ಫುಟ್‌ಪಾತ್ ನಿರ್ಮಾಣ ಹಾಗೂ ಸೈಕಲ್ ಪಾಥ್, ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣ, ಕ್ರೀಡಾ ಇಲಾಖೆಯಿಂದ ೨ ಕೋಟಿ ರೂ. ವೆಚ್ಚದಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮೂರನೇ ವಾರ್ಡಿನ ಬೀಡಿ ಕಾರ್ಮಿಕರ ಕಾಲೋನಿ ಅಭಿವೃದ್ಧಿಗೆ ೧೦ ಕೋಟಿ ರೂ. ಕಾಮಗಾರಿ, ೧.೬೦ ಕೋಟಿ ರೂ. ವೆಚ್ಚದಲ್ಲಿ ಹೊಸಹಳ್ಳಿ- ಕಾರಸವಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ನೀರಾವರಿ ಇಲಾಖೆಯಿಂದ ೧೫ ಕೋಟಿ ರೂ ವೆಚ್ಚದಲ್ಲಿ ಮಳೆ ರಕ್ಷಣಾ ಗೋಡೆ ನಿರ್ಮಣ ಮಾಡಲಾಗುವುದೆಂದು ತಿಳಿಸಿದರು.





