ಮಂಡ್ಯ: ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತೆರಳಿದ್ದ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ವೃದ್ಧ ಸ್ವಾಮಿಗೌಡ ( 74) ಅವರು ಅಪಘಾತದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹರಿಹರ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ವೃದ್ಧ ಸ್ವಾಮಿಗೌಡ ನಿಧನರಾಗಿದ್ದು ಇವರು ಆ.3ರಂದು ಕಾರ್ಯಕ್ರಮವನ್ನು ಮುಗಿಸಿ ಪಾಂಡವಪುರಕ್ಕೆ ವಾಪಸ್ ಬರುವ ವೇಳೆ ತಪ್ಪಿಸಿಕೊಂಡು ಹೆದ್ದಾರಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪಿದ್ದಾರೆ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.
ಸ್ವಾಮಿಗೌಡ ಅವರು ನಾಪತ್ತೆಯಾಗಿರುವ ಸಂಬಂಧ ಇವರ ಕುಟುಂಬಸ್ಥರು ಶ್ರೀರಂಗಪಟ್ಟಣ ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಹರಿಹರ ಪೊಲೀಸ್ ಠಾಣೆಗೆ ಈ ಸಂಬಂಧವಾಗಿ ಸ್ವಾಮಿಗೌಡ ಅವರ ಭಾವಚಿತ್ರವನ್ನು ಕಳುಹಿಸಿದ್ದಾರೆ. ಗುರುತಿಸಿದ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಂದು ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸ್ವಾಮಿಗೌಡ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.