ಮದ್ದೂರು: ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಎರಡು ಹೆಣ್ಣು ಚಿರತೆಗಳು ಶನಿವಾರ ಸಂಜೆ ಬಲೆಗೆ ಬಿದ್ದಿವೆ.
ಮಾರಸಿಂಗನಹಳ್ಳಿ ಗ್ರಾಮದ ಶಿಂಷಾ ನದಿ ತೀರದ ಹೊರವಲಯದ ಸರ್ಕಾರಿ ನೆಡುತೋಪಿನ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿರುವ ಚಿರತೆಗಳು ಸುಮಾರು ಒಂದು ವರ್ಷ ವಯೋಮಾನದ ಹೆಣ್ಣು ಚಿರತೆಗಳಾಗಿವೆ.
ಮಾರಸಿಂಗನ ಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಚಿರತೆಗಳು ಹಾವಳಿ ಮಿತಿಮೀರಿದ ಹಿನ್ನೆಲೆಯಲ್ಲಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ವಾರದ ಹಿಂದೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಬೋನು ಇಟ್ಟ ಕೆಲವೇ ದಿನಗಳಲ್ಲಿ ಚಿರತೆ ಸೆರೆಯಾಗಿರುವುದು ಗ್ರಾಮಸ್ಥರಲ್ಲಿ ನೆಮ್ಮದಿ ಮೂಡಿಸಿದೆ. ಆದರೆ ಈ ಸೆರೆ ಸಿಕ್ಕಿರುವ ಮರಿ ಚಿರತೆಗಳ ಜತೆ ಇನ್ನಷ್ಟು ಚಿರತೆಗಳು ಈ ಭಾಗದಲ್ಲಿ ಇರುವ ಆತಂಕ ವ್ಯಕ್ತಪಡಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ ಮಹದೇವಸ್ವಾಮಿ, ಉಪವಲಯ ಅರಣ್ಯ ಅಧಿಕಾರಿ ರತ್ನಾಕರ್, ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು. ಹೊರ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಈ ಚಿರತೆಗಳನ್ನು ಬಿಡುವುದಾಗಿ ಎಸಿಎಫ್ ಮಹದೇವಸ್ವಾಮಿ ಆಂದೋಲನಕ್ಕೆ ತಿಳಿಸಿದ್ದಾರೆ.
ಚಿರತೆ ಸೆರೆ ಸಿಕ್ಕ ವಿಷಯ ಕಾಡ್ಗಿಚ್ಚಿನಂತೆ ಹರಡಿ ನೂರಾರು ಗ್ರಾಮಸ್ಥರು ಚಿರತೆ ವೀಕ್ಷಿಸಲು, ಮೊಬೈಲ್ ನಲ್ಲಿ ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ನವೆಂಬರ್ ಆರರಂದು ತಾಲ್ಲೂಕಿನ ಕುಂದನಕುಪ್ಪೆಯಲ್ಲಿ ಕುರಿ ತಿನ್ನಲು ಬಂದ ಚಿರತೆ ಕೊಟ್ಟಿಗೆಯಲ್ಲಿ ಸಿಲುಕಿಕೊಂಡು ಅರಣ್ಯಾಧಿಕಾರಿಗಳ ಬಲೆಗೆ ಬಿದ್ದಿತ್ತು.