ವಿರಾಜಪೇಟೆ: ಕಾಫಿ ತೋಟವೊಂದರಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಕಾರ್ಮಿಕರು ಜೀವ ಭಯದಿಂದ ಓಡಿಹೊಗಲು ಯತ್ನಿಸಿ ಗಾಯಗೊಂಡ ಘಟನೆ ಬಿಟ್ಟಂಗಾಲದ ಕಂಡಂಗಾಲ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಮಂದಮಾಡ ಮುನ್ನಾ ಎಂಬವವರ ತೋಟದಲ್ಲಿ ಗುರುವಾರ ಹುಲಿಯೊಂದು ಕಾಣಿಸಿಕೊಂಡಿದೆ. ಎಂದಿನಂತೆ ಸ್ಥಳೀಯ ನಾಲ್ಕು ಮಂದಿ ತೋಟದ ಕೆಲಸಕ್ಕೆ ತೆರಳಿದ್ದರು. ಕಾರ್ಮಿಕರು ತಮ್ಮ ಕರ್ತವ್ಯ ನಿರತರಾಗಿದ್ದ ಸಂದರ್ಭ ಮಧ್ಯಾಹ್ನ ೧೨.೩೦ರ ವೇಳೆಗೆ ಹುಲಿ ಕಾಣಿಸಿಕೊಂಡಿದೆ.
ಕಾರ್ಮಿಕರು ಭಯದಿಂದ ಕಿರುಚಿ ಹುಲಿ ದಾಳಿಯಿಂದ ಪಾರಾಗಲು ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆಯಲ್ಲಿ ಕಾರ್ಮಿಕರು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ತೋಟದಲ್ಲಿ ಕೆಲಸ ಅರ್ಧದಲ್ಲೇ ನಿಲ್ಲಿಸಿ ತೋಟದ ಮಾಲೀಕರ ಮನೆಗೆ ಆಗಮಿಸಿದ್ದಾರೆ. ಮಾಲೀಕರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಕಂಡಂಗಾಲ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹುಲಿಯೊಂದು ಕಾಳುಮೆಣಸು ಕೊಯ್ಯುವ ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಅಲ್ಲದೆ ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಘಟನೆಗಳೂ ನಡೆದಿವೆ. ಇದೀಗ ಮತ್ತೆ ಹುಲಿ ಪ್ರತ್ಯಕ್ಷವಾಗಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





