Mysore
21
overcast clouds
Light
Dark

ಕೊಳಕು ಮಂಡಲ ಹಾವಿಗೆ ಆರೈಕೆ; 27 ಮರಿ ಜನನ

ಸಿದ್ದಾಪುರ: ಉರಗ ಪ್ರೇಮಿಗಳು ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವುದನ್ನು ನೋಡಿದ್ದೇವೆ. ಆದರೆ ಗರ್ಭಿಣಿ ಹಾವಿಗೆ ಆರೈಕೆ ಮಾಡಿ 27 ಮರಿಗಳೊಂದಿಗೆ ಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ಮೂಲಕ ಕೊಡಗಿನ ಉರಗ ಪ್ರೇಮಿ ಸ್ನೇಕ್ ಸುರೇಶ್ ಗಮನ ಸೆಳೆದಿದ್ದಾರೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದ ನಿವಾಸಿ ಉರಗ ಪ್ರೇಮಿ ಸ್ನೇಕ್ ಸುರೇಶ್ ಕೊಳಕು ಮಂಡಲ ಹಾವಿಗೆ ಆರೈಕೆ ಮಾಡಿ ಮರಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾವುಗಳನ್ನು ಕಂಡರೆ ಕೊಲ್ಲದೆ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದು ಬಿಡುವ ಸುರೇಶ್‌ಗೆ ಇತ್ತೀಚೆಗೆ ಅಂಚೆಮನೆ ಆದರ್ಶ್ ಎಂಬವರ ಮನೆಯಲ್ಲಿ ಹಾವು ಇರುವುದಾಗಿ ಮಾಹಿತಿ ಬಂದಿತ್ತು.
ತಕ್ಷಣ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದ ಸಂದರ್ಭದಲ್ಲಿ ಹೊಟ್ಟೆ ದಪ್ಪ ಇರುವುದನ್ನು ಕಂಡು ಇತರ ಉರಗ ತಜ್ಞರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಆಹಾರ ಸೇವಿಸಿದ್ದರಿಂದ ದಪ್ಪ ಇರುವುದಾಗಿ ತಿಳಿಸಿದರು. ಆದರೆ ಈ ಬಗ್ಗೆ ಸಂಶಯಗೊಂಡ ಉರಗ ರಕ್ಷಕ ಸುರೇಶ್, ಅಂತರ್ಜಾಲದಲ್ಲಿ ಕೊಳಕು ಮಂಡಲ ಹಾವಿನ ಬಗ್ಗೆ ಮಾಹಿತಿ ಕಲೆಹಾಕಿದಾಗ ಕೊಳಕು ಮಂಡಲ ಮೊಟ್ಟೆಯಿಡದೆ ಮರಿ ಹಾಕುವ ಬಗ್ಗೆ ತಿಳಿದಿದೆ.

ಈ ಹಿಂದೆ ಹಾವಿನ ಮೊಟ್ಟೆಗೆ ಕೃತಕ ಶಾಖ ನೀಡಿ ಮರಿ ಮಾಡಿದ ಉರಗ ರಕ್ಷಕ, ಇದು ಗರ್ಭಿಣಿ ಇರಬಹುದು ಎಂದು ಸಂದೇಹಗೊಂಡರು. ಅಲ್ಲದೆ ತಡರಾತ್ರಿ ಆಗಿದ್ದರಿಂದ ಮರುದಿನ ಅರಣ್ಯಕ್ಕೆ ಬಿಡಲು ನಿರ್ಧರಿಸಿದರು. ಮನೆಯಲ್ಲಿ ಆರೈಕೆ ಮಾಡಿದ ಸುರೇಶ್ ಮರುದಿನ ಪರಿಶೀಲಿಸಿದಾಗ ಹಾವು ಸುಮಾರು 27 ಮರಿಗಳಿಗೆ ಜನ್ಮ ನೀಡಿದೆ.
ಮರಿ ಹಾಗೂ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಮಾಲ್ದಾರೆ ಅರಣ್ಯ ವ್ಯಾಪ್ತಿಯ ಗೆದ್ದಿಗೆ ಬೆಟ್ಟದಲ್ಲಿ ಆರ್.ಐ.ಟಿ. ಅಧಿಕಾರಿಗಳಾದ ಮಣಿಕಂಠ ಮತ್ತು ಸಶಿ ಅವರ ನೇತೃತ್ವದಲ್ಲಿ ಹಾವು ಮತ್ತು ಮರಿಗಳನ್ನು ಸುರಕ್ಷಿತವಾಗಿ ಬಿಡಲಾಯಿತು.

ಹಾವನ್ನು ಕಂಡೊಡನೆ ಸಾಯಿಸುವ ಜನರ ಮಧ್ಯೆ ವಿಷಪೂರಿತ ಹಾವನ್ನು ಯಾವುದೇ ನೋವು ಮಾಡದೆ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ಸುರೇಶ್ ಕಾರ್ಯ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಆರೈಕೆ ಮಾಡಿ ಮರಿ ಮಾಡಿರುವ ಈ ಅಪರೂಪದ ಘಟನೆ ಸಾಮಾಜಿಕ ಜೀವನದಲ್ಲಿ ಬದುಕು ಹಕ್ಕು ಸರ್ವ ಜೀವ ಜಂತುಗಳಿಗೂ ಇದೆ ಎಂಬುವುದನ್ನು ಸಾಬಿತು ಪಡಿಸಿದೆ.
-ಅಭಿತ, ಗ್ರಾ.ಪಂ. ಸದಸ್ಯೆ ಸಿದ್ದಾಪುರ.

Tags: