ಮಡಿಕೇರಿ: ಇಲ್ಲಿ ಶನಿವಾರ(ಜು.7) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಒಂದೂ ಮಾತನಾಡದೇ ಸಭೆಯುದ್ದಕ್ಕೂ ಮೌನವಾಗಿಯೇ ಕುಳಿತಿದ್ದರು.
ಸಭೆಯಲ್ಲಿ ಭಾಗವಹಿಸಿದ ಉಸ್ತುವಾರಿ ಸಚಿವ ಎನ್.ಎಸ್ ಭೋದರಾಜು ಹಾಗೂ ಶಾಸಕ ಡಾ.ಮಂತರ್‌ಗೌಡ ಜಿಲ್ಲೆಯನ್ನು ಬಾಧಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ, ಡೆಂಗ್ಯೂ, ಮಳೆ ಹಾಗೂ ಪ್ರಾಕೃತಿಕ ವಿಕೋಪ ಸೇರಿದಂತೆ ಮೊದಲಾದ ಸಮಸ್ಯೆಗಳ ಕುರಿತು ಸಭೆಯಲ್ಲಿದ್ದ ಚುನಾಯಿತರು ಅಧಿಕಾರಿಗಳನ್ನು ಪ್ರಶ್ನಿಸಿ, ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದರು. ಆದರೆ, ನೂತನ ಸಂಸದ ಯದುವೀರ್ ಸಭೆಯುದ್ದಕ್ಕೂ ಯಾವುದೇ ಚರ್ಚೆಯಲ್ಲಿ ಭಾಗವಹಿಸದೆ, ಮೂಕಪ್ರೇಕ್ಷಕರಂತೆ ಕುಳಿತು ಅರ್ಧದಲ್ಲೇ ಸಭೆಯಿಂದ ನಿರ್ಗಮಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಮಡಿಕೇರಿ ಕೆಡಿಪಿ ಸಭೆಗೆ ಆಹ್ವಾನ ಬಂದಿತ್ತು. ಅದರಂತೆ ಸಭೆಗೆ ಬಂದಿದ್ದೇನೆ. ನಾನು ಕಲಿಯುವುದು ಬಹಳ ಇದೆ. ಇದೊಂದು ಅನುಭವ. ಸದ್ಯದಲ್ಲೇ ದಿಶಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ಸಮಸ್ಯೆ ಬಗ್ಗೆ ಚರ್ಚಿಸಿವೆ ಎಂದು ಹೇಳಿದರು.