ಕೊಡಗು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ರಾತ್ರಿಯಿಂದಲೇ ಪ್ರಾರಂಭವಾದ ಮಳೆ ಇಂದು ಕೂಡ ಮುಂದುವರಿದಿದೆ. ಇಂದು ಬೆಳಿಗ್ಗೆ ಎಂದಿನಂತೆ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ತಯಾರಿ ಮಾಡಿಕೊಂಡಿದ್ದರು. ಕೆಲ ವಿದ್ಯಾರ್ಥಿಗಳು ಶಾಲೆಗೆ ತೆರಳಿದ್ದರು.
ಆದರೆ ಮಳೆ ಜಾಸ್ತಿಯಾದ ಪರಿಣಾಮ ಶಿಕ್ಷಣ ಇಲಾಖೆ ತಡವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿತು. ಇದರಿಂದ ತೀವ್ರ ಗೊಂದಲಕ್ಕೀಡಾದ ಮಕ್ಕಳು ಧಾರಾಕಾರ ಮಳೆಯ ನಡುವೆಯೇ ಕೊಡೆ ಹಿಡಿದು ಮನೆಗೆ ತೆರಳಿದರು. ಮಕ್ಕಳ ಸ್ಥಿತಿ ಕಂಡ ಪೋಷಕರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.





