ಸಿದ್ದಾಪುರ: ಕಾರಿನಲ್ಲಿ ಮಹಿಳೆಯ ಶವ ಸಾಗಿಸುತ್ತಿದ್ದ ವೇಳೆ ಹರಿಯಾಣ ಮೂಲದ ಮೂವರನ್ನು ಬಂಧಿಸಿರುವ ಘಟನೆ ಕೊಡಗು ಜಿಲ್ಲೆ ಮಾಲ್ದಾರೆ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.
ಹರಿಯಾಣ ಮೂಲದ ಮಹಿಳೆ ಮೃತ ದುರ್ದೈವಿಯಾಗಿದ್ದಾರೆ. ಕಳೆದ ತಡರಾತ್ರಿ ವಿರಾಜಪೇಟೆಗೆ ಒಳಪಡುವ ಸಿದ್ದಾಪುರ ಸಮೀಪದ ಮಾಲ್ದಾರೆ ಲಿಂಗಪುರ ಫಾರೆಸ್ಟ್ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಕಾರನ್ನು ತಪಾಸಣೆ ನಡೆಸುವ ವೇಳೆ ಕಾರಿನಲ್ಲಿದವರ ಚಲನವಲನದಲ್ಲಿ ಅನುಮಾನ ಮೂಡಿದ್ದು, ಹರಿಯಾಣ ನೋಂದಣಿ ಹೊಂದಿದ ಆಲ್ಟೋ ಕಾರನ್ನು ಸರಿಯಾಗಿ ತಪಾಸಣೆ ನಡೆಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನು ಓದಿ : ಮಗನಿಂದಲೇ ತಂದೆಯ ಹತ್ಯೆ ಆರೋಪ : ದೂರು ನೀಡಿದ ಸಹೋದರ
ಕೂಡಲೇ ಮೂವರನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆ ಶವ ಸಾಗಿರೋದಾಗಿ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತ ಮಹಿಳೆ ಹರಿಯಾಣ ಮೂಲದಳಾಗಿದ್ದು, ಮೈಸೂರಿನಲ್ಲಿ ಎರಡನೇ ಮದುವೆಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ ಎರಡನೇ ಗಂಡನೊಂದಿಗೆ ಕಲಹ ಏರ್ಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಹಿಳೆಯ ಶವವನ್ನು ಏನು ಮಾಡಲೆಂದು ತಿಳಿಯದೆ ಕಾರಿನಲ್ಲಿ ಕೊಡಗಿನ ಕಾಡಿನಲ್ಲಿ ಎಸೆದು ಹೋಗಲು ತಂದಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನು ಪ್ರಕರಣ ಮೈಸೂರಿನಲ್ಲಿ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೈಸೂರಿಗೆ ವರ್ಗಾಯಿಸಲಾಗಿದೆ.





