ಮಡಿಕೇರಿ: ಮೂರ್ನಾಡು ಸಮೀಪದ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಸ್ತ್ರಸಂಹಿತೆ ವಿವಾದಕ್ಕೆ ಸಂಬಂಧಪಟ್ಟಂತೆ ಜ.7ರವರೆಗೆ ಇದ್ದ ನಿಷೇಧಾಜ್ಞೆಯನ್ನು ಜ.14ರವರೆಗೆ ಮುಂದುವರಿಸಲಾಗಿದೆ.
ಕೊಡವರ ಸಾಂಪ್ರದಾಯಿಕ ಕುಪ್ಯಚೇಲೆ ಧರಿಸಿ ದೇವಾಲಯ ಪ್ರವೇಶಕ್ಕೆ ನಿರಾಕರಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ 2 ಸಮುದಾಯಗಳ ನಡುವಿನ ವಿವಾದ ಮುಂದುವರೆದಿದೆ. ಈಗಿನ ಆಡಳಿತ ಮಂಡಳಿ ರದ್ದುಗೊಳಿಸಿ ಸರ್ಕಾರದ ಸುಪರ್ದಿಗೆ ಪಡೆಯುವಂತೆ ಅಥವಾ ಕುಪ್ಯಚೇಲೆ ಧರಿಸಿ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಒಂದು ಸಮುದಾಯ ಒತ್ತಾಯಿಸಿದರೆ, ಮತ್ತೊಂದೆಡೆ ಈಗ ಇರುವ ಬೈಲಾ ಪ್ರಕಾರ ಎಲ್ಲಾ ಸಮುದಾಯಕ್ಕೂ ಸಮಾನವಾಗಿ ವಸ್ತ್ರಸಂಹಿತೆ ರೂಪಿಸಲಾಗಿದೆ. ಇದನ್ನು ಹೀಗೆ ಮುಂದುವರೆಸಬೇಕೆನ್ನುವ ಒತ್ತಾಯ ಕೇಳಿ ಬಂದಿದೆ. ಈ ನಡುವೆ ಜಿಲ್ಲಾಡಳಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದು, ಜ.7ರವರೆಗೆ ಇದ್ದ ನಿಷೇಧಾಜ್ಞೆಯನ್ನು ಜ.14ರವರೆಗೆ ಮುಂದುವರೆಸಲಾಗಿದೆ. ಆದರೆ, ಈ ಹಿಂದೆ ದೇವಾಲಯದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದರೆ ಈಗ 200 ಮೀ. ವ್ಯಾಪ್ತಿಯಲ್ಲಿ ಮಾತ್ರ ನಿಷೇಧಾಜ್ಞೆ ಮುಂದುವರೆಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿ 5 ಜನಕ್ಕಿಂತ ಹೆಚ್ಚಿನ ಜನತೆ ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಪ್ರಚೋಧನಾತ್ಮಕ ಘೋಷಣೆಗೆ ಅವಕಾಶ ಇರುವುದಿಲ್ಲವೆಂದು ಘೋಷಿಸಿ ಉಪವಿಭಾಗಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಆದೇಶ ಹೊರಡಿಸಿದ್ದಾರೆ.