ಮಡಿಕೇರಿ : ನಗರದ ಪೊಲೀಸ್ ವಸತಿ ಗೃಹಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಸತತ 2 ತಿಂಗಳ ಕಾರ್ಯಾಚರಣೆ ಬಳಿಕ ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಾರ್ವಲ್ಲಿ ಗ್ರಾಮದ ನಿವಾಸಿ ಸುರೇಶ್ ಸೆಂಗಾರ್(23), ಧಾರ್ ಜಿಲ್ಲೆಯ ಮಾಲ್‌ಪುರ ಗ್ರಾಮದ ಮನೀಶ್ ಭಗೇಲ್(27) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಕೆ. ರಾಮರಾಜನ್ ಅವರು ಪ್ರಕರಣ ಸಂಬಂಧ ಮಾಹಿತಿ ನೀಡಿದರು. ಕಳೆದ ಜೂನ್ 17ರಂದು ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ಮಡಿಕೇರಿಯ ಪೊಲೀಸ್ ವಸತಿ ಗೃಹಗಳ ಬಾಗಿಲು ಮುರಿದು ಸುಮಾರು 95,000 ರೂ.ನಗದು ಹಾಗೂ 5.5 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಕಳ್ಳರು ಯಾವುದೇ ಸುಳಿವು ಬಿಡದಿದ್ದರಿಂದ ಕಾರ್ಯಾಚರಣೆ ಕಷ್ಟವಾಗಿತ್ತು ಎಂದರು.
ಮೂವರು ಆರೋಪಿಗಳು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಈ ಕೃತ್ಯವೆಸಗಿದ್ದರು. ಈ ಸಂಬಂಧ ಬ್ಲರ್ ಆಗಿದ್ದ ಸಿಸಿ ಕ್ಯಾಮೆರಾ ಫೋಟೋವೊಂದು ಮಾತ್ರ ದೊರಕಿತ್ತು. ಇದರ ಜಾಡು ಹಿಡಿದು ತನಿಖೆ ಆರಂಭಿಸಲಾಗಿತ್ತು. ಬಳಿಕ ಮೂವರು ಆರೋಪಿಗಳು ಒಂದೇ ಬೈಕ್‌ನಲ್ಲಿ ಸೋಮವಾರಪೇಟೆ ಕಡೆಗೆ ಸಂಚರಿಸಿದ್ದ ಚಿತ್ರಣ ಕಂಡುಬಂದಿತ್ತು. ಆದರೆ, ಮಕ್ಕಂದೂರುವರೆಗೆ ತೆರಳಿದ ಬೈಕ್ ಬಳಿಕ ನಾಪತ್ತೆಯಾಗಿತ್ತು. ಪರಿಶೀಲನೆ ವೇಳೆ ಕಾಂಡನಕೊಲ್ಲಿ ಎಂಬಲ್ಲಿ ಕೆರೆಯೊಂದರಲ್ಲಿ ಬೈಕ್ ಅನ್ನು ತಳ್ಳಿಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಅಲ್ಲದೆ, ಅಲ್ಲಿಯೂ ಒಂದು ಕಳವು ನಡೆದಿರುವುದು ಪತ್ತೆಯಾಗಿತ್ತು ಎಂದು ತಿಳಿಸಿದರು.
ಬಳಿಕ ಬೈಕ್ ನಂಬರ್ ಆಧಾರದ ಮೇಲೆ ಮಹಾರಾಷ್ಟ್ರ ನೋಂದಣಿ ಹೊಂದಿದ ಮಾಲೀಕನನ್ನು ಪತ್ತೆಹಚ್ಚಲಾಗಿತ್ತು. ಆದರೆ, ಮಾಲೀಕ ಗೋವಾದಲ್ಲಿ ತನ್ನ ಬೈಕ್ ಕಳವು ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಗೋವಾಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಅಲ್ಲಿ ಬೈಕ್ ಜೊತೆಗೆ 203 ಮನೆಗಳಲ್ಲಿಯೂ ಕಳವು ಆಗಿರುವುದು ಕಂಡುಬಂದಿತ್ತು. ಅಲ್ಲಿಯೂ ಸಿಸಿ ಟಿವಿ ಚಿತ್ರಣ ಸಂಗ್ರಹಿಸಿ ತನಿಖೆ ಚುರುಕುಗೊಳಿಸಿದೆವು ಎಂದು ಎಸ್‌ಪಿ ತಿಳಿಸಿದರು.
ಆರೋಪಿಗಳ ಪತ್ತೆಗೆ ತಂತ್ರಜ್ಞಾನದ ಮೊರೆ ಹೋದೆವು. ಪ್ರವೀಣ್, ರಾಜೇಶ್, ಶರತ್ ತನಿಖೆ ಮಾಡಿ ಆರೋಪಿಗಳ ಒಂದು ಮೊಬೈಲ್ ಆಕ್ಟಿವೇಟ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆ ಮಾಹಿತಿ ಮೇರೆಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಗ್ಯಾಂಗ್ ಎಂಬುದು ಖಾತರಿಯಾಗಿತ್ತು. ಆ ಬಳಿಕ ಪರಿಶೀಲಿಸಿದಾಗ ರಾಜ್ಯದ ಹಲೆವೆಡೆ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ ಎಂದರು.
ಮಧ್ಯಪ್ರದೇಶ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಇಲ್ಲಿಂದ ಎಸ್‌ಐ ಮಂಜುನಾಥ್ ನೇತೃತ್ವದಲ್ಲಿ ಯೋಗೇಶ್, ನಿರಂಜನ್, ಮುನೀರ್, ಪ್ರಭಾಕರ್ ಅವರ ತಂಡವನ್ನು ಕಳುಹಿಸಲಾಗಿತ್ತು. ಸುಮಾರು 1 ತಿಂಗಳ ಕಾಲ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭ ಪ್ರಕರಣದಲ್ಲಿ ಭಾಗಿಯಾದ ಒಬ್ಬನ ಮೇಲೆ ಕೊಲೆ ಪ್ರಕರಣ ಇದ್ದರೆ, ಮತ್ತಿಬ್ಬರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದರೂ ಅವರನ್ನು ಸ್ಥಳೀಯ ಪೊಲೀಸರಿಗೆ ಬಂಧಿಸಲು ಸಾಧ್ಯವಾಗಿರಲಿಲ್ಲ. ಅಲ್ಲಿ ಆರೋಪಿಗಳನ್ನು ಬಂಧಿಸಲು ಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬರುವವರೆಗೆ ಕಾದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು ಎಂದು ಎಸ್‌ಪಿ ಮಾಹಿತಿ ನೀಡಿದರು.
ಕಣ್ಣುಗುಡ್ಡೆಯನ್ನೇ ಕಿತ್ತಿದ್ದ ಕುಖ್ಯಾತ ತಂಡ
ಬಂಧಿತ ಸುರೇಶ್ ಮೇಲೆ ಇಲ್ಲಿಯವರೆಗೆ 24 ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ಸಂಖ್ಯೆ 50ಕ್ಕೂ ಹೆಚ್ಚು ಇರುವ ಸಾಧ್ಯತೆ ಇದೆ. ಇವರು ಬೇಲ್ ಸಿಕ್ಕಿದ ಮೇಲೆ ಮತ್ತೆ ಪೊಲೀಸರಿಗೆ ಸಿಗುವುದಿಲ್ಲ. ಮೊಬೈಲ್ ಫೋನ್ ಬಳಸುವುದಿಲ್ಲ. ಸಾರ್ವಜನಿಕರು ಹಿಂದೆ ಈ ಆರೋಪಿಗಳನ್ನು ಹಿಡಿಯಲು ತೆರಳಿದ ಸಂದರ್ಭದಲ್ಲಿ ಅವರ ಕಣ್ಣುಗುಡ್ಡೆಯನ್ನೇ ಕಿತ್ತು ಬಂದಿದ್ದರು. ಅಂತಹ ಕುಖ್ಯಾತರ ತಂಡ ಇವರದ್ದು ಎಂದು ಎಸ್‌ಪಿ ಕೆ.ರಾಮರಾಜನ್ ಮಾಹಿತಿ ನೀಡಿದರು.
1.5 ಲಕ್ಷ ರೂ. ಕಳವು ಪತ್ತೆಗೆ 15 ಲಕ್ಷ ರೂ. ವೆಚ್ಚ !
ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವಾಗಿದ್ದರೆ, ಆರೋಪಿಗಳ ಪತ್ತೆಗಾಗಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಾಚರಣೆ ಮಾಡಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು. ಇವರಿಗೆ ಜಾಮೀನು ದೊರೆತರೆ ಮತ್ತೆ ಇವರ ಪತ್ತೆಗೆ 15 ಲಕ್ಷ ರೂ. ವೆಚ್ಚ ಮಾಡಬೇಕಾಗುತ್ತದೆ ಎಂದರು.
ಕಳ್ಳತನ ಸಕ್ಸಸ್ ಆದರೆ ಕುರಿಬಲಿ..!
ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ತೆರೆದ ಸ್ಥಳದ ಮರದ ಕೆಳಭಾಗದಲ್ಲಿ 2 ದೇವಿ ವಿಗ್ರಹಗಳಿವೆ. ಆರೋಪಿಗಳು ಕಳ್ಳತನ ಯಶಸ್ವಿಯಾದರೆ ಆ ಸ್ಥಳಕ್ಕೆ ತೆರಳಿ ಕುರಿಬಲಿ ನೀಡುತ್ತಿದ್ದರು. ಆ ಊರಿನಲ್ಲಿ ಸುಮಾರು 300ಕ್ಕೂ ಅಧಿಕ ಕಳ್ಳರಿದ್ದು, ಅವರೆಲ್ಲರೂ ಇದೇ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆ ಪ್ರದೇಶಕ್ಕೆ ಹೋಗಿ ಪೊಲೀಸರು ಆರೋಪಿಯನ್ನು ಬಂಧಿಸಲು ಕೂಡ ಸಾಧ್ಯವಾಗುವುದಿಲ್ಲ ಎಂದು ಎಸ್‌ಪಿ ಮಾಹಿತಿ ನೀಡಿದರು.





