Mysore
14
overcast clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಕೊಡಗು | ಮಿತಿ ಮೀರಿದ ಕಾಡಾನೆ ಉಪಟಳ

increasing elephant attacks in kodagu

ಮಡಿಕೇರಿ : ಕೊಡಗು ಜಿಲ್ಲೆಯ ಗಡಿ ಭಾಗದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಪಾರೆ, ಬಿಟಿಯಾಡಿ, ಮಡೆಕಾನ, ಫಾರೆಸ್ಟ್ ಐಬಿ, ಪಚ್ಚೆಪಿಲಾವ್ ಮುಂತಾದ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ದಾಳಿಯನ್ನು ತಡೆಯಲು ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರನ್ ನಾಯರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿತ್ತು.

ಭಾಗಮಂಡಲ ವಲಯ ಅರಣ್ಯಾಧಿಕಾರಿ ರವೀಂದ್ರ ಹಾಗೂ ವನ್ಯಜೀವಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಆನೆಗಳು ಕಾಡಿನಿಂದ ಕೃಷಿ ಜಮೀನಿಗೆ ಬಂದು ರೈತರು ಬೆಳೆದ ತೆಂಗು, ಅಡಕೆ, ಬಾಳೆ, ಕಾಫಿ ಮತ್ತಿತರ ಫಸಲುಗಳನ್ನು ನಾಶಪಡಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು. ಅರಣ್ಯದಂಚಿನಲ್ಲಿ ಕಂದಕ ನಿರ್ಮಿಸಿದರೆ ಆನೆಗಳ ಹಾವಳಿ ತಡೆಯಲು ಸಾಧ್ಯ, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕಂದಕ ನಿರ್ಮಾಣ ಮಾಡಲು ನಮ್ಮ ಅಭ್ಯಂತರವಿಲ್ಲ, ಆದರೆ ಕರಿಕೆ ಗ್ರಾಮ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು, ಭೂ ಕುಸಿತವಾಗುವ ಸಂಭವವಿದೆ ಎಂದು ಅರಣ್ಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಈ ಹಿಂದೆ ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಆನೆ ಕಂದಕ ತೆಗೆಯಲಾಗಿದ್ದು, ಇಲ್ಲಿಯವರೆಗೆ ಯಾವುದೇ ಭೂ ಕುಸಿತ ಸಂಭವಿಸಿಲ್ಲ. ಕಂದಕದಿಂದ ಭೂಕುಸಿತ ಉಂಟಾಗುವುದಿಲ್ಲ, ಆದ್ದರಿಂದ ಕಂದಕ ನಿರ್ಮಾಣವೇ ಸೂಕ್ತ ಪರಿಹಾರ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಅರಣ್ಯ ಪ್ರವಾಸಿ ಮಂದಿರದಿಂದ ಕೇರಳದ ಗಡಿಯವರೆಗೂ, ಬಿಟಿಯಾಡಿ, ಮಡೆಕಾನ, ಕೊಳಂಗಾರೆ, ಅಂಬೇಡ್ಕರ್ ಕಾಲೋನಿ, ಪಚ್ಚೆಪಿಲಾವ್, ಆಲತ್ತಿಕಡವ್ ಮುಂತಾದ ಕಡೆಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿರುವುದರಿಂದ ಈ ಪ್ರದೇಶದಲ್ಲಿ ಆನೆ ಕಂದಕಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರನ್ ನಾಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಡಾನೆಗಳ ಉಪಟಳ ತಡೆಯಲು ಶೀಘ್ರದಲ್ಲಿ ಕಂದಕಗಳನ್ನು ನಿರ್ಮಿಸಬೇಕು. ವನ್ಯಜೀವಿಗಳು ರೈತರ ಫಸಲು ನಾಶಮಾಡಿದರೆ ಅರಣ್ಯ ಅಧಿಕಾರಿಗಳು ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ ಉಪಾಧ್ಯಕ್ಷರಾದ ಕಲ್ಪನಾ ಜಗದೀಶ್, ಸರ್ವ ಸದಸ್ಯರು, ಮಡಿಕೇರಿ ತಾಲ್ಲೂಕು ಕೆಡಿಪಿ ಸದಸ್ಯ ಜಯನ್, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ಪೊಲೀಸ್ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು, ಸಭೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!