ಮಡಿಕೇರಿ : ಸೈಬರ್ ಪೊಲೀಸರ ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ, ಲಕ್ಷಾಂತರ ರೂ. ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ, ಮಹಿಳೆ ಸಹಿತ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಹಾಲೇರಿ ನಿವಾಸಿ ಇಬ್ರಾಹಿಂ ಬಾದ್ ಷಾ(25), ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಬಳಿಘಟ್ಟ ಗ್ರಾಮದ ಬಿ.ಎಂ.ರಾಘವೇಂದ್ರ (19) , ಇಬ್ರಾಹಿಂ ಬಾದ್‌ಷಾನ ಪತ್ನಿ, ಬೆಂಗಳೂರಿನ ಬನಶಂಕರಿ ನಿವಾಸಿ ಸಂಗೀತಾ(30), ಕುಶಾಲನಗರದ ಆದರ್ಶ ದ್ರಾವಿಡ ಕಾಲೋನಿಯ ಸಿ.ಕೆ.ಚರಣ್ (19) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ?:
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ನಿವಾಸಿ ಪರಶಿವಮೂರ್ತಿ ಎಂಬವರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬಕ್‌ನಲ್ಲಿ ಒಬ್ಬರಿಗೆ ಮೆಸೇಜ್ ಅಥವಾ ಕಮೆಂಟ್ ಮಾಡಿದ್ದರೆನ್ನಲಾಗಿದೆ. ಇದಕ್ಕೆ ಸಂಬಂಧಿಸಿಂತೆ ಅಪರಿಚಿತ ವ್ಯಕ್ತಿಯು ನ.2ರಂದು ಪರಶಿವಮೂರ್ತಿಯವರ ಮೊಬೈಲ್ ಸಂಖ್ಯೆಗೆ ಕರೆಮಾಡಿ ತಾನು ಪಿರಿಯಾಪಟ್ಟಣ ಸೈಬರ್ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ.
ಅಲ್ಲದೆ, ನೀವು ಹುಡುಗಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್, ಕಮೆಂಟ್ ಮಾಡಿ ಟಾರ್ಚರ್ ನೀಡಿರುವ ಕುರಿತು ದೂರು ದಾಖಲಾಗಿದೆ. ನೀವು ಹಣ ನೀಡಿದರೆ ಸರಿ ಮಾಡುತ್ತೇನೆ. ಇಲ್ಲವಾದಲ್ಲಿ ಮನೆಯ ಬಳಿ ಬಂದು ಕರೆದುಕೊಂಡು ಹೋಗಿ ಜೈಲಿಗೆ ಹಾಕುತ್ತೇನೆ ಹಾಗೂ ಅಕ್ಕ-ಪಕ್ಕದವರ ಮನೆಯ ಮುಂದೆ ಮಾನ ಮರ್ಯಾದೆ ಹೋಗುವಂತೆ ಮಾಡುತ್ತೇನೆ ಎಂದು ಹಲವು ಬಾರಿ ಹೆದರಿಸಿ ಸುಮಾರು 7 ಲಕ್ಷ ರೂ.ಗಳನ್ನು ಪಡೆದಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧವಾಗಿ ಜ.11ರಂದು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪರಶಿವಮೂರ್ತಿ ನೀಡಿದ ದೂರಿನ ಅನ್ವಯ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ: 318(2), 319(1), 308(2) ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಪಿ.ಚಂದ್ರಶೇಖರ್, ಕುಶಾಲನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಪ್ರಕಾಶ್, ಪಿಎಸ್‌ಐ ಗೀತಾ ಹಾಗೂ ಠಾಣಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಮಾಹಿತಿ ಸಂಗ್ರಹಿಸಿ ಐವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧಿಕ್ಷಕ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.



