ಕೊಡಗು: ಮಡಿಕೇರಿಯ ವಸತಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 2ನೇ ತರಗತಿ ವಿದ್ಯಾರ್ಥಿ ಸಜೀವವಾಗಿ ದಹನಗೊಂಡಿದ್ದಾನೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಗೇರಿ ಗ್ರಾಮದ ಹರಿಮಂದಿರ ವಸತಿ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಶಾಲೆಯ 2ನೇ ತರಗತಿ ವಿದ್ಯಾರ್ಥಿ ಪುಷ್ಪಕ್ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಇಂದು ಮುಂಜಾನೆ 4-5 ಗಂಟೆ ಸುಮಾರಿಗೆ ವಸತಿ ಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾಲೆಯ ವಸತಿ ಗೃಹದಲ್ಲಿ ಒಟ್ಟು 53 ಮಂದಿ ನೆಲೆಸಿದ್ದರು. ಆದರೆ ಓರ್ವ ಬಾಲಕ ಮಾತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾನೆ. ಬಾಲಕ 2ನೇ ತರಗತಿಯಲ್ಲಿ ಓದುತ್ತಿದ್ದನು. ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





