ಮಡಿಕೇರಿ: ಬೆಳಕಿನ ದಸರೆ ಎಂದೇ ಹೆಸರಾದ ಮಡಿಕೇರಿಯ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಸಾಗಿದ ಮಂಟಪಗಳನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ನವರಾತ್ರಿಯ ಉತ್ಸವಕ್ಕೆ ಸಂಭ್ರಮದ ತೆರೆ ಎಳೆದರು.
ಮೈಸೂರು ದಸರಾ ಮುಗಿಯುತ್ತಿದ್ದಂತೆ ಇಲ್ಲಿ ಆರಂಭವಾದ 10 ಮಂಟಪಗಳ ಶೋಭಾಯಾತ್ರೆಗೆ ಇಲ್ಲಿನ ಪೇಟೆ ಶ್ರೀರಾಮಮಂದಿರದ ಮಂಟಪವು ಮುನ್ನುಡಿ ಬರೆದಿದೆ.
150ಕ್ಕೂ ಅಧಿಕ ವರ್ಷಗಳಷ್ಟು ಸುದೀರ್ಘ ಕಾಲದಿಂದ ವಿಜಯದಶಮಿಯಂದು ಮೆರವಣಿಗೆಯಲ್ಲಿ ಭಾಗಿಯಾಗುತ್ತಿರುವ ಈ ದೇಗುಲದ ಮಂಟಪ ವಿಷ್ಣುವಿನ ಮತ್ಸ್ಯಾವತಾರ ಕಥಾವಸ್ತುವನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿತ್ತು.
ವರ್ಣಮಯ ಮಂಟಪಗಳನ್ನು ನೋಡುತ್ತಾ ಹಲವರು ಮೈಮರೆತು ನರ್ತಿಸಿದರು. ಮಂಟಪಗಳಲ್ಲಿ ಪ್ರದರ್ಶನಗೊಂಡ ಪೌರಾಣಿಕ ಕಥೆಗಳನ್ನು ಕೂತೂಹಲದಿಂದ ವೀಕ್ಷಣೆ ಮಾಡಿದರು.
ಈ ಮೂಲಕ ಮಂಜಿನ ನಗರಿ ಮಡಿಕೇರಿ ದಸರಾಗೆ ಅದ್ಧೂರಿ ತೆರೆ ಬಿದ್ದಿತು. ಇಲ್ಲೂ ಕೂಡ ಸಹಸ್ರಾರು ಮಂದಿ ಸಾರ್ವಜನಿಕರು ದಸರಾ ಕಣ್ತುಂಬಿಕೊಂಡು ಖುಷಿಪಟ್ಟರು.