ಗೋಣಿಕೊಪ್ಪ : ನಾಪತ್ತೆಯಾಗಿದ್ದ 2 ವರ್ಷದ ಬಾಲಕಿಯನ್ನು ಶ್ವಾನವೊಂದು ಪತ್ತೆಹಚ್ಚಿರುವ ಘಟನೆ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?:
ಬಿ.ಶೆಟ್ಟಿಗೇರಿ ಗ್ರಾಮದ ಕೊಂಗಣ ಗ್ರಾಮಕ್ಕೆ ೫ ದಿನಗಳ ಹಿಂದೆ ಜೇನು ಕುರುಬರ ಸುನಿಲ್ ಹಾಗೂ ನಾಗಿಣಿ ದಂಪತಿ ತಮ್ಮ ೨ ವರ್ಷದ ಪುತ್ರಿ ಸುನನ್ಯಳೊಂದಿಗೆ ಆಗಮಿಸಿ ಗ್ರಾಮದ ಬೆಳೆಗಾರರಾದ ಕಡೆಮಾಡ ಶರಿ ಗಣಪತಿ ಅವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಎಂದಿನಂತೆ ಶನಿವಾರ ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ದಂಪತಿ ತನ್ನ ಕಂದಮ್ಮನನ್ನು ಜತೆಯಲ್ಲಿ ಕರೆದೊಯ್ದಿದ್ದರು. ಇತರ ಕಾರ್ಮಿಕರು ಕೂಡ ತಮ್ಮ ಮಕ್ಕಳನ್ನು ತೋಟಕ್ಕೆ ಕರೆದುಕೊಂಡು ಬಂದಿದ್ದರು. ಮಕ್ಕಳನ್ನು ಒಂದು ಕಡೆ ಆಟವಾಡಲು ಬಿಟ್ಟು ಹೆತ್ತವರು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು.
ಸಂಜೆ ಕೆಲಸ ಮುಗಿಸಿದ ದಂಪತಿ ಮಕ್ಕಳನ್ನು ಆಟವಾಡಲು ಬಿಟ್ಟಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ ಸುನನ್ಯ ಸ್ಥಳದಲ್ಲಿರಲಿಲ್ಲ. ಈ ಬಗ್ಗೆ ಉಳಿದ ಮಕ್ಕಳನ್ನು ವಿಚಾರಿಸಿದರಾದರೂ ಮುಗ್ಧ ಮಕ್ಕಳಿಗೆ ಸುನನ್ಯ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿರಲಿಲ್ಲ. ಗಾಬರಿಗೊಂಡ ದಂಪತಿ ಉಳಿದ ಕಾರ್ಮಿಕರ ಸಹಾಯದಿಂದ ಕಾಫಿ ತೋಟದಲ್ಲಿ ತಮ್ಮ ಕಂದಮ್ಮನಿಗಾಗಿ ಹುಡುಕಾಟ ನಡೆಸಿದರಾದರೂ ಮಗು ಸುಳಿವು ಮಾತ್ರ ಲಭ್ಯವಾಗಲಿಲ್ಲ. ತೋಟದಲ್ಲಿ ಎಷ್ಟೇ ಜೋರಾಗಿ ಕರೆದರೂ ಮಗುವಿನ ಚೀರಾಟವಾಗಲಿ, ಅಳುವಿನ ಶಬ್ದವಾಗಲಿ ಕೇಳಿಸಲಿಲ್ಲ.
ಇದನ್ನೂ ಓದಿ:-ಚಿರತೆ ದಾಳಿ : ನಾಲ್ಕು ಮೇಕೆ ಬಲಿ
ಕಾಫಿ ತೋಟದಲ್ಲಿ ಮಗು ನಾಪತ್ತೆಯಾದ ವಿಷಯವನ್ನು ಕಾರ್ಮಿಕರು ತಮ್ಮ ತೋಟದ ಮಾಲೀಕರಿಗೆ ತಿಳಿಸುತ್ತಿದ್ದಂತೆಯೇ ತೋಟದ ಮಾಲೀಕರು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಗಮನಕ್ಕೆ ತಂದಿದ್ದಾರೆ. ಬಳಿಕ ಕೊಲ್ಲಿರ ಬೋಪಣ್ಣ ಅರಣ್ಯ ಇಲಾಖೆಯ ಡಿಎಫ್‌ಒ ನೆಹರು, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶಂಕರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್‌ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ೩೦ಕ್ಕೂ ಅಽಕ ಸಿಬ್ಬಂದಿಯ ತಂಡ ಬಿ.ಶೆಟ್ಟಿಗೇರಿ, ಕೊಂಗಣ ಭಾಗಕ್ಕೆ ತೆರಳಿ ಕಾರ್ಯಾಚರಣೆ ಕೈಗೊಂಡಿತು. ಸಂಜೆ ೪ ಗಂಟೆಯಿಂದ ನಡುರಾತ್ರಿಯವರೆಗೂ ಅರಣ್ಯ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಇಡೀ ಕಾಫಿ ತೋಟ ಹುಡುಕಾಟ ನಡೆಸಿದರಾದರೂ ಮಗುವಿನ ಸುಳಿವು ಲಭ್ಯವಾಗಲಿಲ್ಲ. ಅರಣ್ಯ ಸಿಬ್ಬಂದಿ ಭಾನುವಾರ ಮುಂಜಾನೆ ಆರು ಗಂಟೆಗೆ ಕಾರ್ಯಾಚರಣೆ ಮುಂದುವರಿಸಿದರು.
ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ಕೂಡ ಹುಡುಕಾಟ ನಡೆಸಿದ್ದರು. ಈ ವೇಳೆ ಸಾಕು ನಾಯಯೊಂದು ಬಾಲಕಿ ಇರುವ ಜಾಗದಲ್ಲಿ ನಿಂತು ಬೊಗಳಿದೆ. ಕೂಡಲಢ ಅಲ್ಲಿಗೆ ತೆರಳಿ ನೋಡಿದಾಗ ಸುನನ್ಯ ಇರುವುದು ಪತ್ತೆಯಾಗಿದೆ.
ಗೋಣಿಕೊಪ್ಪ ಪೊಲೀಸ್ ಠಾಣಾಽಕಾರಿ ಪ್ರದೀಪ್ ಕುಮಾರ್ ಕಾರ್ಮಿಕರ ಕುಟುಂಬಗಳಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಮಕ್ಕಳ ಬಗ್ಗೆ ನಿಗಾವಹಿಸುವಂತೆ ಸಲಹೆ ನೀಡಿದರು.
ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಜೆ.ಕೆ.ಶ್ರೀಧರ್, ನಾಗೇಶ್, ದಿವಾಕರ್, ಮಂಜುನಾಥ್, ಕಿರಣ ಆಚಾರ್ಯ, ಗಸ್ತು ಅರಣ್ಯ ಪಾಲಕರಾದ ಪೊನ್ನಪ್ಪ, ಸೋಮಣ್ಣ ಗೌಡ, ಅಂತೋಣಿ ಪ್ರಕಾಶ್, ಗ್ರಾಮಸ್ಥರಾದ ಕೊಲ್ಲಿರ ಬೋಪಣ್ಣ, ಕಡೆಮಾಡ ಅನಿಲ್ ಕಾಳಪ್ಪ, ಸಂತೋಷ್, ಸುಬ್ರಮಣಿ, ಶರತ್, ಆರ್‌ಆರ್‌ಟಿ ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





