ಹಾಸನ: ಕಾಡಾನೆ ದಾಳಿಗೆ ವೃದ್ಧ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ.
78 ವರ್ಷದ ಪುಟ್ಟಯ್ಯ ಎಂಬುವವರೇ ಆನೆ ದಾಳಿಗೆ ಸಿಲುಕಿ ಬಲಿಯಾದ ವೃದ್ಧನಾಗಿದ್ದಾರೆ.
ಪುಟ್ಟಯ್ಯ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ.
ಬಳಿಕ ವೃದ್ಧನನ್ನು ಕಾಲಿನಿಂದ ತುಳಿದು, ಸಾಯಿಸಿ ಶವದ ಮೇಲೆ ಕಾಫಿ ಗಿಡವನ್ನು ಮುಚ್ಚಿ ಹೋಗಿದೆ.
ಪುಟ್ಟಯ್ಯ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕಾಫಿ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.