ಹಾಸನ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ ಬರೋಬ್ಬರಿ 2 ವರ್ಷಗಳ ಬಳಿಕ ಭರ್ತಿಯಾಗಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಎಲ್ಲಾ ಜಲಾಶಯಗಳು ಸಂಪೂರ್ಣ ಭರ್ತಿಯತ್ತ ಸಾಗಿವೆ. ಇನ್ನೂ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮನೆಮಾಡಿದೆ.
ಪ್ರಸ್ತುತ ಜಲಾಶಯಕ್ಕೆ 23,363 ಕ್ಯೂಸೆಕ್ಸ್ ಒಳಹರಿವು ಇದ್ದು, 22,532 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿಗಳಾಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 2921.02 ಅಡಿಗಳಾಗಿದೆ.
ಜಲಾಶಯದಲ್ಲಿ 36.156 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೂ ನೀರು ಹರಿಸಲಾಗುತ್ತಿದೆ. ನೀರಾವರಿ ಇಲಾಖೆ, ಕೃಷಿ ಚಟುವಟಿಕೆಗಳು ಹಾಗೂ ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮನೆಮಾಡಿದ್ದು, ಈ ಬಾರಿ ಕಾಲುವೆಗಳ ನೀರನ್ನು ನಂಬಿ ಉತ್ತಮ ಫಸಲು ಬೆಳೆಯಲು ಅಂದಾಜು ರೂಪಿಸುತ್ತಿದ್ದಾರೆ.
ಮಳೆ ಮುಂದುವರಿದರೆ ಹೇಮಾವತಿ ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.