ಹಾಸನ : ಹಾಸನಾಂಬೆ ದೇವಿ ದರ್ಶನದ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಮಾಹಿತಿ ನೀಡಿದ್ದು, ಬುಧವಾರ ಸಂಜೆ 7 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ ಎಂದು ತಿಳಿಸಿದ್ದಾರೆ.
ದೈನಂದಿನ ಮಾಹಿತಿ ನೀಡಿರುವ ಸಚಿವರು, ದೀಪಾವಳಿ ವಿಶೇಷ ಪೂಜೆ ನೈವೇದ್ಯಗಳು ಹಾಗೂ ಇತರ ಅಲಂಕಾರಗಳ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನು ಓದಿ: ಹಬ್ಬದ ದಿನವೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಜನಸಾಗರ
ಸೋಮವಾರ ಬೆಳಿಗ್ಗೆಯೂ ಹಾಸನಾಂಬ ದರ್ಶನ ಸುಗಮವಾಗಿ ನಡೆದಿದೆ. ಪೂಜಾ ಕಾರ್ಯಕ್ರಮದ ಕಾರಣ ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ ೨ – ೩.೩೦ ಗಂಟೆಯ ನಡುವೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಮಂಗಳವಾರ ದೀಪಾವಳಿ ವಿಶೇಷ ಪೂಜೆಯ ಕಾರಣಕ್ಕೆ ರಾತ್ರಿ ೯ ಗಂಟೆಗೆ ಸಾರ್ವಜನಿಕ ದರ್ಶನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಬುಧವಾರ ಬೆಳಗಿನ ಜಾವ ೫.೩೦ಕ್ಕೆ ಪೂಜೆ ಮುಗಿಸಿದ ನಂತರ ಮತ್ತೆ ದರ್ಶನ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ಕೊನೆಯ ದಿನವಾದ ಬುಧವಾರ ಸಂಜೆ ೭ ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಅದೇ ದಿನ ಸಂಜೆ ಸಿದ್ದೇಶ್ವರ ಸ್ವಾಮಿಯ ಜಾತ್ರೆ ನಡೆಯಲಿದೆ. ಗುರುವಾರ ಮಧ್ಯಾಹ್ನ ಶಾಸ್ತ್ರದ ಪ್ರಕಾರ ಪೂಜೆ ನೆರವೇರಿಸಿ ಮುಂದಿನ ವರ್ಷದವರೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಆದರೆ, ಈ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.





