ಹಾಸನ: ಜಾತಿಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ ಬೇಲೂರಿನ ಜೈಭೀಮ್ ನಗರದಲ್ಲಿ ನಡೆದಿದೆ.
ಶಿಕ್ಷಕಿಯ ಮುಖ, ಕೈ-ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದು, ಶಿಕ್ಷಕಿಯನ್ನು ಬಚಾವ್ ಮಾಡಲು ಬಂದ ಪತಿ ಸೇರಿದಂತೆ 7 ಮಂದಿಯ ಮೇಲೂ ನಾಯಿ ದಾಳಿ ಮಾಡಿವೆ.
ಶಿಕ್ಷಕಿ ಚಿಕ್ಕಮ್ಮ ಎಂಬುವವರೇ ಗಂಭೀರವಾಗಿ ಗಾಯಗೊಂಡಿರುವವರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಗಾಯಾಳುಗಳನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮ್ಮ ಅವರಿಗೆ ನೀಡಿದ್ದ ಸಮೀಕ್ಷೆ ಮುಗಿಸಲು ಇಂದು ಕಡೆಯ ದಿನವಾಗಿತ್ತು. ಬಾಕಿಯಿದ್ದ ಮೂರು ಮನೆ ಸಮೀಕ್ಷೆ ನಡೆಸಲು ಅವರು ಪತಿ ಜೊತೆಗೆ ತೆರಳಿದ್ದರು. ಈ ವೇಳೆ ನಾಯಿಗಳು ದಾಳಿ ಮಾಡಿವೆ ಎಂದು ತಿಳಿದುಬಂದಿದೆ.





