ಹಾಸನ: ಹಾಸನದಲ್ಲಿ ಕಾಫಿ ತೋಟಕ್ಕೆ ಹೋದ ಕಾರ್ಮಿಕನ ಮೇಲೆ ಒಂಟಿಸಲಗವೊಂದು ಹುಲಿಯಂತೆ ಕಾದು ಕುಳಿತು ದಾಳಿ ಮಾಡಿರುವ ಘಟನೆ ನಡೆದಿದೆ.
ಆನೆ ಘೀಳಿಟ್ಟುಕೊಂಡು ಕಾರ್ಮಿಕನನ್ನು ತುಳಿದು ಸಾಯಿಸಲು ಅಟ್ಟಾಡಿಸಿಕೊಂಡು ಬಂದಿದ್ದು, ಆನೆಯಿಂದ ತಪ್ಪಿಸಿಕೊಂಡು ಓಡಿ ಮನೆಯ ಬಳಿಯಿದ್ದ ಮೆಟ್ಟಿಲನ್ನೇರಿ ಮನೆಯ ಮೇಲೆ ಹೋಗಿ ಕಾರ್ಮಿಕ ಜೀವ ಉಳಿಸಿಕೊಂಡಿದ್ದಾನೆ.
ಆದರೆ, ಕಾರ್ಮಿಕ ಪುನಃ ಮೆಟ್ಟಿಲಿನಿಂದ ಇಳಿದು ಬರಬಹುದು ಎಂದು ಮನೆಯ ಮುಂದಿನ ಕಾಫಿ ತೋಟದಲ್ಲಿ ಒಂಟಿಸಲಗ ಸುಮಾರು ಹೊತ್ತು ಅಡಗಿ ಕುಳಿತು ಬೇಟೆಗಾಗಿ ಹುಲಿಯಂತೆ ಹೊಂಚು ಹಾಕಿತ್ತು. ಆನೆಯನ್ನು ಮನೆ ಮೇಲಿನಿಂದ ನೋಡುತ್ತಿದ್ದ ಕಾರ್ಮಿಕ ಆನೆ ಸಂಪೂರ್ಣವಾಗಿ ಹೋಗುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಕೆಳಗೆ ಇಳಿದಿದ್ದಾನೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಭಾಗದಲ್ಲಿ ಕಾಡಾನೆಗಳು ಹಾಗೂ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಆನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪುವವರ ಪ್ರಕರಣ ಹೆಚ್ಚಾಗುತ್ತಲೇ ಇದೆ. ಇಂದಿನ ಘಟನೆಯಿಂದ ಜನತೆ ಭಾರೀ ಭಯಭೀತರಾಗಿದ್ದು, ಕಾಡಾನೆಗಳ ದಾಳಿಯನ್ನು ತಪ್ಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.