ಮಡಿಕೇರಿ: ಹಶೀಶ್ ಆಯಿಲ್ ಮಾರಾಟ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಕೊಡಗು ಜಿಲ್ಲಾ ಪೊಲೀಸರು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅಹಮ್ಮದ್ ಕಬೀರ್ (೩೭), ಅಬ್ದುಲ್ ಖಾದರ್ (೨೭), ಮಹಮ್ಮದ್ ಮುಜಾಬಿಲ್ (೨೨) ಬಂಧಿತ ಆರೋಪಿಗಳು.
ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಬಂಧಿತರಿಂದ ೧೦ ಲಕ್ಷ ರೂ ಮೌಲ್ಯದ ೧.೧೬೦ ಗ್ರಾಂ ಹಶೀಶ್ ಆಯಿಲ್ ವಶಪಡಿಸಿಕೊಳ್ಳಲಾಗಿದ್ದು, ಭಾಗಮಂಡಲ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನ ತಪಾಸಣೆ ವೇಳೆ ಎರಡು ಅನುಮಾನಸ್ಪದ ನಂಬರ್ ಪ್ಲೇಟ್‌ಗಳು ಪತ್ತೆ ಆಗಿದೆ. ಪರಿಶೀಲನೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಶೀಶ್ ಆಯಿಲ್ ಪತ್ತೆಯಾಗಿದೆ. ವಿಚಾರಣೆ ಸಂದರ್ಭ ಹಶೀಶ್ ಆಯಿಲ್‌ನ್ನು ಮಾರಾಟ ಮಾಡಲು ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಧಿತರೆಲ್ಲರೂ ಕೇರಳ ಮೂಲದ ಆರೋಪಿಗಳಾಗಿದ್ದು, ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ ವಿವಿಧ ನಂಬರ್ ಪ್ಲೇಟ್, ಮಾರುತಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಅಹಮದ್ ವಾಹನ ಕಳ್ಳತನ, ರಾಬರಿ, ಹನಿಟ್ರ್ಯಾಪ್‌ನಲ್ಲಿ ಸಕ್ರಿಯನಾಗಿದ್ದ, ಈತನ ವಿರುದ್ಧ ಮಡಿಕೇರಿ ಪೋಲಿಸ್ ಸ್ಟೇಷನ್‌ನಲ್ಲಿ ಕೂಡ ವಿವಿಧ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದರು.