ಹನೂರು: ಪಟ್ಟಣದಲ್ಲಿ ಕೆಶಿಪ್ ರಸ್ತೆ ಅಭಿವೃದ್ಧಿ ಸಂಬಂಧ 2 ಬೃಹತ್ ಗಾತ್ರದ ಮರಗಳನ್ನು ತೆರವು ಗೊಳಿಸಲಾಗಿದೆ.
ಕೊಳ್ಳೇಗಾಲದಿಂದ- ಹನೂರು ಪಟ್ಟಣದ ವರೆಗೆ 108 ಕೋಟಿ ವೆಚ್ಚದಲ್ಲಿ 23 ಕಿಲೋ ಮೀಟರ್ ರಸ್ತೆಯನ್ನು ಕೆಶಿಪ್ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.ಈ ಸಂಬಂಧ ಕಳೆದ 1ವಾರದಿಂದ ಮಳಿಗೆಗಳನ್ನು ತೆರವು ಗೊಳಿಸಲಾಗಿತ್ತು. ಇದೀಗ ಮುಖ್ಯರಸ್ತೆಯಲ್ಲಿದ್ದ 2ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿ ವೇಗ ಪಡೆದುಕೊಂಡಿದೆ.
ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿ 4ವರ್ಷಗಳೇ ಕಳೆದಿದ್ದರೂ ಇನ್ನೂ ಪೂರ್ಣಗೊಂಡಿರಲಿಲ್ಲ. ಸಚಿವ ವಿ ಸೋಮಣ್ಣ ಹಾಗೂ ಶಾಸಕ ಆರ್ ನರೇಂದ್ರ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿರುವ ಹಿನ್ನೆಲೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕರಿಗೆ ನಿತ್ಯ ಧೂಳಿನ ಅಭಿಷೇಕ : ಕೆಶಿಪ್ ರಸ್ತೆ ಅಭಿವೃದ್ಧಿ ಸಂಬಂಧ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಅಧಿಕ ಭಾರದ ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿವೆ. ಇದಲ್ಲದೆ ತಮಿಳುನಾಡಿಗೆ ತೆರಳುವ ಸರಕು ಸಾಗಣೆ ವಾಹನಗಳು ಸಹ ಇದೇ ರಸ್ತೆಯಲ್ಲಿ ತೆರಳುತ್ತಿರುವುದರಿಂದ ಧೂಳು ಹೆಚ್ಚಾಗಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.ಕೆಶಿಪ್ ಅಭಿಯಂತರರಿಗೆ ಸಾರ್ವಜನಿಕರು ಹಲವು ಬಾರಿ ರಸ್ತೆಗೆ ಪ್ರತಿದಿನ ನೀರು ಹಾಕಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ,ಸಚಿವರು ಹಾಗೂ ಗಣ್ಯರು ಮಲೆಮಹದೇಶ್ವರ ಬೆಟ್ಟಕ್ಕೆ ಹಾಗೂ ಕಾರ್ಯಕ್ರಮ ನಿಮಿತ್ತ ಬರುವಂತಹ ಸಂದರ್ಭದಲ್ಲಿ ನೀರನ್ನು ಹಾಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.



