ಹನೂರು: ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಶೇ. 40 ಇರುವುದು 60 ಆಗಬಹುದು ಎಂದು ಶಾಸಕ ಆರ್ ನರೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯೇ ಒಂದೇ ಬಿಜೆಪಿಯ ಸಾಧನೆ. ಅತಿವೃಷ್ಟಿಯಿಂದ ಆದಂತಹ ನಷ್ಟ ಭರಿಸುವ ಯಾವುದೇ ಪರಿಹಾರ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲುಪದ ಕಾರಣ ಪರಿಶೀಲನೆ ಮಾಡುವ ಸಲುವಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರಿಗೆ ತಡೆದು ಮೊಟ್ಟೆ ಹೊಡೆಯುವ ಕೃತ್ಯ ಮಾಡಿಸುವುದು ಬಿಜೆಪಿ ಕಾರ್ಯ ಸಾಧನೆ, ಇದು ಯಾವ ನ್ಯಾಯ?
ಹನೂರು ಕ್ಷೇತ್ರ ತುಂಬಾ ಹಿಂದುಳಿದಿದೆ ಅಭಿವೃದ್ಧಿ ಮಾಡುತ್ತೇನೆಂದು ಇತ್ತೀಚಿಗೆ ಕೆಲವರು ವ್ಯಾಪಾರಸ್ಥರು ಬಂದು ಟೆಂಟ್ ಹಾಕಿದ್ದಾರೆ. ಹನೂರು ಹಿಂದುಳಿದಿದೆ ಎನ್ನುವುದು ಚುನಾವಣಾ ಸಮೀಪ ಬಂದಾಗಲೇ ಅವರಿಗೆ ಅರಿವಾಗುವುದು. ಇಲ್ಲಿವರೆಗೆ ಎಲ್ಲಿ ಹೋಗಿದ್ದರು.
ಹಿಂದೆಯೂ ಹೀಗೆ ತುಂಬಾ ಜನ ಟೆಂಟ್ ಹಾಕಿ, ವ್ಯಾಪಾರವಿಲ್ಲದೆ ವಾಪಸ್ ಹೋಗಿದ್ದಾರೆ. ಹನೂರು ಕ್ಷೇತ್ರದ ಜನತೆ ತುಂಬಾ ಸ್ವಾಭಿಮಾನಿಗಳು. ಯಾವುದೇ ಆಸೆ ಆಮಿಷಗಳಿಗೆ ಬಗ್ಗುವುದಿಲ್ಲ. ಇಂದು ಸೇರಿರುವ ಜನ ಯಾವುದೇ ನಿರೀಕ್ಷೆಗಳಿಲ್ಲದೆ ಅಭಿಮಾನಕ್ಕಾಗಿ ಬಂದಿರುವ ಜನ. ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ನಿಮ್ಮ ಅಭಿಮಾನ ಪ್ರೀತಿ ವಿಶ್ವಾಸ ಎಲ್ಲಿಯವರೆಗೆ ನನ್ನ ಮೇಲೆ ಇರುತ್ತದೆಯೋ ಅಲ್ಲಿವರೆಗೂ ವಲಸೆ ಬಂದವರು ಮತ್ತು ಟೆಂಟ್ ಹಾಕಿದವರು ಏನು ಮಾಡಲು ಸಾಧ್ಯವಿಲ್ಲ.
ಕಾಂಗ್ರೆಸ್ ಪಕ್ಷದ ಜನಪರ ಕಾಳಜಿ ಉಳ್ಳ ಕಾರ್ಯಕ್ರಮಗಳು ಮತ್ತು ನನ್ನ ಅವಧಿಯಲ್ಲಿ ಕ್ಷೇತ್ರದ ಅತ್ಯಂತ ಆಗಿರುವ ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ತಿಳಿದಿದೆ.
ನನ್ನ ಕ್ಷೇತ್ರದತ್ತ ಟೆಂಟ್ ಹಾಕಿ ವ್ಯಾಪಾರಕ್ಕಾಗಿ ಬಂದವರು ಸಂತೆ ಮುಗಿದ ಮೇಲೆ ಟೆಂಟ್ ಎತ್ತಿಕೊಂಡು ಹೋಗುತ್ತಾರೆ. ಇಲ್ಲಿ ಜನಸೇವೆಗೆ ಉಳಿಯುವವರು ನಾವು ಮಾತ್ರ.
ಸಾವರ್ಕರ್ ಮತ್ತು ಸ್ವತಂತ್ರ ಹೋರಾಟಕ್ಕೆ ಸಂಬಂಧವೇ ಇಲ್ಲ. ಆದರೂ ಬಿಜೆಪಿಯವರು ಗಣೇಶ ಪ್ರತಿಷ್ಠಾಪನೆ ಜೊತೆಗೆ ಸಾವರ್ಕರ್ ಫೋಟೋ ಇಡುತ್ತೇವೆ ಎಂದು ಜನರನ್ನು ದಿಕ್ಕು ತಪ್ಪಿಸೋ ಹುನ್ನಾರ ಮಾಡುತ್ತಿದ್ದಾರೆ. ನಿಜವಾಗಿ ಪೂಜೆ ಮಾಡಬೇಕಾಗಿರುವುದು ಗಾಂಧೀಜಿಯವರನ್ನು ಹಾಗೂ ಈ ದೇಶಕ್ಕೆ ಉತ್ತಮ ಸಂವಿಧಾನವನ್ನು ರಚಿಸಿ ಕೊಟ್ಟ ಅಂಬೇಡ್ಕರ್ ಅವರನ್ನು ಪೂಜಿಸಬೇಕು. ಬಿಜೆಪಿಗೆ ಬೇಕಿರುವುದು ಸ್ವತಂತ್ರಕ್ಕಾಗಿ ಹೋರಾಟ ಮಾಡಿದಂತಹ ಮಹನೀಯರನ್ನು ಕೊಂದ ಗೂಡ್ಸೆ ಅಂತಹ ವ್ಯಕ್ತಿಗಳು ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿಗುಂಡ್ಲುಪೇಟೆ ಯುವ ಮುಖಂಡ ಗಣೇಶ್ ಪ್ರಸಾದ್,ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಕೆರೆಹಳ್ಳಿ ನವೀನ್ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜು, ಮುಖಂಡರುಗಳಾದ ಪಾಳ್ಯ ಕೃಷ್ಣ,ಅಜ್ಜಿಪುರ ನಾಗರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.