ಬಿಟ್ಟು ಹೋಗಿರುವ ಪತಿ; ವೃದ್ಧ ತಂದೆಯೇ ಆಧಾರಸ್ತಂಭ
ಮದ್ದೂರು: ಕಳೆದ ೧೧ ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಗ್ರಾ.ಪಂ. ಆವರಣದಲ್ಲಿ ತನ್ನಿಬ್ಬರು ಗಂಡು ಮಕ್ಕಳೊಂದಿಗೆ ವಾಸ ಮಾಡುವ ಮೂಲಕ ದಿನನಿತ್ಯದ ಜೀವನ ದೂಡುತ್ತಿರುವುದು ನೋಡುಗರ ಮನ ಕಲಕುವಂತಿದೆ.
ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಕುಣಿಗಲ್ ಮೂಲದವರಾದ ಅನ್ನಪೂರ್ಣ ಮತ್ತು ಈಕೆಯ ತಂದೆ ಸುರೇಶ್ ಸೇರಿದಂತೆ ತನ್ನಿಬ್ಬರು ಮಕ್ಕಳಾದ ತನ್ಮಯ್‌ಗೌಡ (೫ ವರ್ಷ) ಅಭಯ್‌ಗೌಡ (೩ ವರ್ಷ) ಹಾಗೂ ೧೧ ದಿನಗಳ ಹಿಂದೆ ಜನಿಸಿದ ಗಂಡು ಮಗುವಿನೊಂದಿಗೆ ಗ್ರಾ.ಪಂ. ಆವರಣದಲ್ಲೇ ನೆಲೆಸಿದ್ದಾರೆ.
ಎರಡು ತಿಂಗಳ ಗರ್ಭಿಣಿಯಾಗಿದ್ದ ಅನ್ನಪೂರ್ಣ ಅವರನ್ನು ಪತಿ ಬಿಟ್ಟು ಹೋದ ಹಿನ್ನೆಲೆಯಲ್ಲಿ ವಯಸ್ಸಾದ ತಂದೆ ಸುರೇಶ್ ಅವರೇ ಆಧಾರಸ್ತಂಭವಾಗಿದ್ದು, ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಇವರು ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣ ತನ್ನ ಮಗಳು ಹಾಗೂ ಮೊಮ್ಮಕಳ ಒಪ್ಪತ್ತಿನ ಊಟಕ್ಕಾಗಿ ಅವರಿವರನ್ನು ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ೧೧ ದಿನಗಳ ಹಿಂದೆ ಮಂಡ್ಯದ ವಿಮ್ಸ್ ಆಸ್ಪತ್ರೆಯಲ್ಲಿ ಮಗು ಜನಿಸಿದ ಬಳಿಕ ಗ್ರಾ.ಪಂ. ಆವರಣ ಸೇರಿರುವ ಹಸಿ ಬಾಣಂತಿ ಮಳೆ, ಚಳಿ ಎನ್ನದೆ ಮತ್ತು ಯಾವುದೇ ಸೌಲಭ್ಯವಿಲ್ಲದೆ ಜೀವನ ನಡೆಸುತ್ತಿರುವುದು ಮನ ಕಲಕುವಂತಿದೆ.
ಇವರ ಕುಟುಂಬಕ್ಕೆ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಯಾವೊಂದು ಸೌಲಭ್ಯವೂ ಸಿಗದೆ ವಂಚಿತವಾಗಿದ್ದು, ಹೆಮ್ಮನಹಳ್ಳಿ ಗ್ರಾಮಸ್ಥರು ನೀಡುವ ಆಹಾರವೇ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವಂತಾಗಿದೆ. ಸರ್ಕಾರ ಬಾಣಂತಿಯರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸೌಲಭ್ಯದಿಂದ ದೂರವೇ ಉಳಿದಿದ್ದು, ಸ್ಥಳೀಯ ಗ್ರಾ.ಪಂ. ಹಾಗೂ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕಾಗಿದೆ.
ಗ್ರಾ.ಪಂ. ಆವರಣದಲ್ಲಿ ಸೊಳ್ಳೆಕಾಟ ಹಾಗೂ ದಿನ ನಿತ್ಯ ಸುರಿಯುತ್ತಿರುವ ಮಳೆ, ಚಳಿ ನಡುವೆಯೂ ತನ್ನ ಮೂರು ಮಕ್ಕಳೊಂದಿಗೆ ದಿನದೂಡುತ್ತಿದ್ದು, ಕೂಡಲೇ ಈಕೆಯ ನೆರವಿಗೆ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನ ಜತೆಗೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತುರ್ತು ಕ್ರಮವಹಿಸಬೇಕಾಗಿದೆ.
ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ತಮ್ಮ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ನಮ್ಮ ನೆರವಿಗೆ ಧಾವಿಸುವಂತೆ ಮತ್ತು ಮಕ್ಕಳ ಶಿಕ್ಷಣ, ವಯಸ್ಸಾದ ತಂದೆಯೊAದಿಗೆ ಜೀವನ ಸಾಗಿಸಲು ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.
– ಅನ್ನಪೂರ್ಣ, ನೊಂದ ಮಹಿಳೆ
ಹೆಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಹಿಳೆ ಮತ್ತು ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಕಳುಹಿಸಿ ಮಗುವಿನ ಹಾರೈಕೆ ಮತ್ತು ಮಕ್ಕಳ ಲಾಲನೆ ಪಾಲನೆ ಬಗ್ಗೆ ಕ್ರಮವಹಿಸಿ ಸರ್ಕಾರದ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು.
– ಜಿ. ಪ್ರದೀಪ್, ಸಿಡಿಪಿಒ, ಮದ್ದೂರು.





